ತುಮಕೂರು: ಕುಣಿಗಲ್ನ ಐಸ್‌ಕ್ರೀಮ್ ಫ್ಯಾಕ್ಟರಿ ಮಾಲೀಕನನ್ನು ಅವರ ಮಗನೇ ತಂದೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆತಂಕಕಾರಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಿಂದ ಬೆಳಕಿಗೆ ಬಂದಿದೆ.
ಹೆಬ್ಬೂರಿನ ತಿಮ್ಮಸಂದ್ರ ಗ್ರಾಮದ ಐಸ್‌ಕ್ರೀಮ್ ಫ್ಯಾಕ್ಟರಿ ಮಾಲೀಕ ನಾಗೇಶ್ (58) ಮಗನಿಂದ ಕೊಲೆಯಾದವರು. ಕೊಲೆ ಮುಚ್ಚಿಡಲು ತಂದೆಗೆ ಕರೆಂಟ್ ಶಾಕ್ ಹೊಡೆದಿದೆ ಎಂದು ಬಿಂಬಿಸಿದ್ದ ಮಗ ಸೂರ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೇ.11 ರಂದು ಐಸ್‌ಕ್ರೀಮ್ ಫ್ಯಾಕ್ಟರಿಯಲ್ಲಿದ್ದಾಗ ಅಪ್ಪ-ಮಗನ ನಡುವೆ ಯಾವುದೋ ವಿಚಾರವಾಗಿ ಜಗಳ ನಡೆದಿದೆ. ಕೋಪದಲ್ಲಿ ಅಪ್ಪ ಮಗನಿಗೆ ಹೊಡೆದಿದ್ದಾನೆ. ಇದರಿಂದ ಕೊಪಗೊಂಡ ಮಗ ಸೂರ್ಯ ಟವೆಲ್‌ನಿಂದ ಅಪ್ಪನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದಕ್ಕೆ ಸೂರ್ಯನ ಜೊತೆಗೆ ಬಂದಿದ್ದ ಯುವಕ ಸಾತ್ ನೀಡಿದ್ದಾನೆ.
ಕೊಲೆ ಮುಚ್ಚಿಡಲು ಅಪ್ಪನಿಗೆ ಕರೆಂಟ್ ಹೊಡೆದಿದೆ ಎಂದು ಸೂರ್ಯ ಬಿಂಬಿಸಿದ್ದ. ಆದರೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಮಗನೇ ತಂದೆಯನ್ನು ಕೊಲೆ ಮಾಡಿರುವ ವಿಚಾರ ಬಯಲಾಗಿದೆ. ನಾಗೇಶ್ ಅವರ ಸಹೋದರಿ ಸವಿತಾ ಅಣ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಕುಣಿಗಲ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ದೂರಿನಲ್ಲೇನಿತ್ತು?
ನನ್ನ ಅಣ್ಣನಾದ ನಾಗೇಶ್.ಡಿ ಅವರು ಕುಣಿಗಲ್ ಟೌನ್ ಶಿವಾಜಿ ಟೆಂಟ್ ರಸ್ತೆಯಲ್ಲಿರುವ ಐಸ್‌ಕ್ರೀಮ್ ಫ್ಯಾಕ್ಟರಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಬಗ್ಗೆ ದೂರು ನೀಡಿದ್ದು, ಕುಣಿಗಲ್ ಪೊಲೀಸರು ನಮ್ಮ ಅಣ್ಣನ ಮೃತದೇಹ ದೊರೆತ ಸ್ಥಳದಲ್ಲಿ ಮಹಜರು ನಡೆಸಿ, ಫ್ಯಾಕ್ಟರಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದ ಡಿವಿಆರ್ ಆಫ್ ಆಗಿರುವುದನ್ನು ಗಮನಿಸಿ, ಡಿವಿಆರ್ ವಶಕ್ಕೆ ಪಡೆದುಕೊಂಡಿದ್ದರು.
ನಂತರ ಮೆ.12 ರಂದು ಬೆಳೂರು ಕ್ರಾಸ್ ನಲ್ಲಿರುವ ಬಿಜಿಎಸ್ ಆಸ್ಪತ್ರೆಯಲ್ಲಿ ಅಣ್ಣನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಮೃತದೇಹವನ್ನು ಶವಸಂಸ್ಕಾರ ಮಾಡಲು ನನ್ನ ವಶಕ್ಕೆ ನೀಡಿದ್ದರು. ಕುಣಿಗಲ್ ಪೊಲೀಸರು ನಮ್ಮ ಅಣ್ಣನ ಫ್ಯಾಕ್ಟರಿಯಲ್ಲಿ ವಶಕ್ಕೆ ಪಡೆದಿದ್ದ ಡಿವಿಆರ್ ಪರಿಶೀಲಿಸಲು ನನ್ನನ್ನು ಠಾಣೆಗೆ ಕರೆಸಿಕೊಂಡಿದ್ದರು, ಡಿವಿಆರ್ ಪರಿಶೀಲಿಸಿದಾಗ ಮೆ.11 ನನ್ನ ಅಣ್ಣನ ಮಗ ಸೂರ್ಯ ಹಾಗೂ ಆತನ ಜೊತೆಯಲ್ಲಿ ಮತ್ತೊಬ್ಬ ಫ್ಯಾಕ್ಟರಿಗೆ ಬಂದಿದ್ದರು. ಈ ವೇಳೆ ನಮ್ಮ ಅಣ್ಣ ಹಾಗೂ ಆತನ ಮಗ ಸೂರ್ಯನ ನಡುವೆ ಮಾತಿನ ಚಕಮಕಿ ನಡೆದಿದೆ.
ಸೂರ್ಯ, ಅಣ್ಣ ನಾಗೇಶ್ಗೆ ಒಂದು ಬಟ್ಟೆಯಿಂದ ಕುತ್ತಿಗೆ ಬಿಗಿದಿದ್ದಾನೆ, ಈ ವೇಳೆ ಸೂರ್ಯನ ಜೊತೆಗೆ ಬಂದಿದ್ದ ಯುವಕ ಅಣ್ಣನ ಕೈಗಳನ್ನು ಹಿಂದಕ್ಕೆ ಹಿಡಿದುಕೊಂಡು ಹಲ್ಲೆ ಮಾಡಿ, ಕೊಲೆ ಮಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಕಂಡು ಬಂದಿದೆ.
ಮೇ 11 ನಾವು ಸ್ಥಳಕ್ಕೆ ಬಂದು ನಮ್ಮ ಅಣ್ಣನ ಮೃತದೇಹ ನೋಡಿದ್ದಾಗ ಮೃತದೇಹವು ಮಂಚದ ಮೇಲೆ ಮಲಗಿದಂತೆ ಮತ್ತು ಬಲಗೈ ಬೆರಳುಗಳಿಗೆ ಎಲೆಕ್ಟ್ರಿಕ್ ಶಾಕ್ ಆಗಿರುವಂತೆ ಕಂಡು ಬಂದಿತ್ತು. ಆದರೆ ನನ್ನ ಅಣ್ಣನ ಮಗ ಹಾಗೂ ಆತನ ಜೊತೆಯಲ್ಲಿದ್ದ ಯುವಕ, ಕೊಲೆ ಮಾಡಿರುವ ವಿಚಾರವನ್ನು ಮರೆಮಾಚುವ ಸಲುವಾಗಿ, ಕರೆಂಟ್ ಶಾಕ್ ಮೃತಪಟ್ಟಿರುವುದಾಗಿ ಬಿಂಬಿಸುವ ಸಲುವಾಗಿ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದರು.
ನಮ್ಮ ಅಣ್ಣನ ಕೊಲೆಗೆ ಕಾರಣರಾದ ಸೂರ್ಯ ಮತ್ತು ಆತನನೊಂದಿಗೆ ಬಂದಿದ್ದ ಯುವಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರುತ್ತೇನೆ ಎಂದು ಕೊಲೆಯಾದ ನಾಗೇಶ್ ಅವರ ತಂಗಿ ಸವಿತಾ ದೂರಿನಲ್ಲಿ ಉಲ್ಲೇಖಿಸಿದ್ದರು.


