ಕನ್ನಡ ಮಾತಾಡು, ಕನ್ನಡ ಹಾಡು ಹಾಕಿ ಅಂದರೆ ಹೊಟ್ಟೆಪಾಡಿಗೆ ಇಲ್ಲಿಗೆ ಬಂದು ನೆಲೆಸಿರುವ ಅನ್ಯ ರಾಜ್ಯದವರು ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕುವ ದುಸ್ಸಾಹಸ ಮಾಡುತ್ತಿದ್ದಾರೆ.
ಈ ಘಟನೆಗಳು ಪದೇಪದೆ ಮರುಕಳಿಸುತ್ತಿರುವ ನಡುವೆ ಬೆಂಗಳೂರಿನ ಹಾಟ್ ನಗರಗಳಲ್ಲಿ ಒಂದಾದ ಕೋರಮಂಗಲದಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಡಿಸ್ ಪ್ಲೇ ಪ್ರದರ್ಶಿಸುವ ಮೂಲಕ ರೆಸ್ಟೋರೆಂಟ್ ಉದ್ಧಟತನ ಮೆರೆದಿದೆ.
ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ ಹೋಟೆಲ್ ಜಿಎಸ್ ಸ್ಯೂಟ್ ರೆಸ್ಟೋರೆಂಟ್ ಸಾರ್ವಜನಿಕವಾಗಿ ಹಾಕಲಾದ ಡಿಸ್ ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರನ್ನು ಕೆಣಕುವಂತಹ ಅಶ್ಲೀಲ ಪದ ಪ್ರದರ್ಶಿಸಿ ಅಪಮಾನಿಸಲಾಗಿದೆ.
ಶುಕ್ರವಾರ ರಾತ್ರಿ ಈ ಅವಹೇಳನಕಾರಿ ಬರಹ ಡಿಸ್ ಪ್ಲೇ ಬೋರ್ಡ್‌ನಲ್ಲಿ ‘KANNAGIDA Mothec***’ ಎಂಬ ಶಬ್ದಗಳನ್ನು ಬಳಸಿ ಕನ್ನಡಿಗರನ್ನು ಅವಮಾನಿಸಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತಿ ಕೋರಮಂಗಲ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ವಿಚಾರಣೆ ನಡೆಸಿದ್ದಾರೆ.
ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹೊಟೇಲ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬೋರ್ಡ್‌ನ ಬರಹವನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲಾಗಿದೆ ಎಂದು ಶಂಕಿಸಲಾಗಿದ್ದು, ಒಬ್ಬನನ್ನು ವಶಕ್ಕೆ ಪಡೆದು ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಣಿಸಿರುವ ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.


