ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ವರ ಹೃದಯಾಘಾತದಿಂದ ಕುಸಿದು ಬಿದ್ದು ಮದುವೆ ಮಂಟಪದಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸಂಭವಿಸಿದೆ.
ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಜಮಖಂಡಿ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ನಿವಾಸಿ ಹಾಗೂ ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ ಶ್ರೀಶೈಲ ಕುರಣಿ ಅವರ ಪುತ್ರ ಪ್ರವೀಣ್ ಕುರಣಿ ಮೃತಪಟ್ಟ ವರ.
ಪ್ರವೀಣ್ ಕುರಣಿ ಹಾಗೂ ಪೂಜಾ ಎಂಬವರ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಆರತಕ್ಷತೆ ಮುಗಿಯುವಷ್ಟರಲ್ಲಿ ಮಧುಮಗ ಪ್ರವೀಣ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪ್ರವೀಣ್ ಮನೆಯಲ್ಲಿ ಬೆಳಗ್ಗೆ ದೈವದ ಅಕ್ಕಿಕಾಳು ಕಾರ್ಯ ನಡೆದಿತ್ತು. ಬಳಿಕ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದರು. ಕಲ್ಯಾಣಮಂಟಪಕ್ಕೆ ಆಗಮಿಸಿದ ನವ ದಂಪತಿಗೆ ಬಂಧು-ಮಿತ್ರರು ಆರತಕ್ಷತೆ ಹಾಕಿ ಆಶೀರ್ವದಿಸುವ ಗಳಿಗೆಯಲ್ಲೇ ಯಾರೂ ಊಹಿಸದ ರೀತಿ ದುರ್ಘಟನೆ ನಡೆದಿದೆ.
ಹಸೆಮಣೆ ಏರಿ ವಿಭಿನ್ನ ಕನಸುಗಳನ್ನು ಕಂಡಿದ್ದ ಪ್ರವೀಣ್ ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಶುಭ ಸಂದರ್ಭದಲ್ಲಿ ಹೃದಯಾಘಾತಕ್ಕೆ ವರ ಬಲಿಯಾಗಿದ್ದನ್ನು ಕಂಡು ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.


