ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೋಲನ್ನು ಜೀರ್ಣಿಸಿಕೊಳ್ಳಲು ಆಗದೇ ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರನ್ನು ಅಭಿನಂದಿಸದೇ ಮೈದಾನ ತೊರೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 27 ರನ್ ಗಳಿಂದ ಸೋಲುಂಡ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿತ್ತು.
ಪಂದ್ಯದ ಕೊನೆಯ ಓವರ್ ನಲ್ಲಿ ಗೆಲ್ಲಲು 35 ರನ್ ಗಳಿಸಬೇಕಿದ್ದ ಆರ್ ಸಿಬಿ ಸೋಲುಂಡರೂ 16 ರನ್ ಗಳಿಸಿದರೆ ಪ್ಲೇಆಫ್ ಪ್ರವೇಶಿಸಬೇಕಿತ್ತು. ಕ್ರೀಸ್ ನಲ್ಲಿದ್ದ ಧೋನಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಸುಲಭ ಗೆಲುವಿನ ಸೂಚನೆ ನೀಡಿದ್ದರು. ಆದರೆ ಯಶ್ ದಯಾಳ್ ಎಸೆದ ಎರಡನೇ ಎಸೆತದಲ್ಲಿ ಔಟಾಗಿ ಆಘಾತಕ್ಕೆ ಒಳಗಾದರು. ಫಿನಿಷರ್ ಆಗಿ ಗಮನ ಸೆಳೆದಿದ್ದ ಧೋನಿ ತಮ್ಮ ಕೊನೆಯ ಪಂದ್ಯದಲ್ಲಿ 13 ಎಸೆತದಲ್ಲಿ 23 ರನ್ ಗಳಿಸಿದರೂ ಕೊನೆಯ ಓವರ್ ನಲ್ಲಿ ಎಡವಿದ್ದು ಜೀರ್ಣಿಸಿಕೊಳ್ಳಲು ಆಗಲಿಲ್ಲ.
ಕೊನೆಯ ಎರಡು ಎಸೆತಗಳಲ್ಲಿ 8 ರನ್ ಗಳಿಸಬೇಕಿದ್ದಾಗ ಜಡೇಜಾ ಎರಡೂ ಎಸೆತಗಳಲ್ಲಿ ರನ್ ಗಳಿಸಲು ವಿಫಲವಾಗುತ್ತಿದ್ದಂತೆ ತಂಡ ಸೋಲಿನ ಆಘಾತಕ್ಕೆ ಒಳಗಾಯಿತು.
ಪಂದ್ಯದ ನಂತರ ಆರ್ ಸಿಬಿ ಆಟಗಾರರು ಸಂಭ್ರಮದಲ್ಲಿ ಮುಳುಗಿದ್ದರು. ಈ ವೇಳೆ ಆಟಗಾರರನ್ನು ಅಭಿನಂದಿಸಲು ಧೋನಿ ಸರತಿ ಸಾಲಿನಲ್ಲಿ ಕೆಲವು ನಿಮಿಷ ನಿಲ್ಲಬೇಕಾಯಿತು. ಇದರಿಂದ ಅಸಮಾಧಾನಗೊಂಡ ಧೋನಿ ಮೈದಾನ ತೊರೆದು ಹೊರತನಡೆದರು.
ಮಿಸ್ಟರ್ ಕೂಲ್ ಎಂದೇ ಹೆಸರಾಗಿದ್ದ ಧೋನಿ ವೃತ್ತಿ ಜೀವನದ ಕೊನೆಯಲ್ಲಿ ಆರ್ ಸಿಬಿ ಆಟಗಾರರನ್ನು ಅಭಿನಂದಿಸದೇ ಇರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೇ ಪಂದ್ಯದ ನಂತರದ ಕಾರ್ಯಕ್ರಮದಲ್ಲೂ ಸಿಎಸ್ ಕೆ ನಾಯಕ ಆಗಲಿ ಅಥವಾ ಆಟಗಾರರಾಗಲಿ ಕಾಣಿಸಿಕೊಳ್ಳಲಿಲ್ಲ. ಇದು ಕೂಡ ಚೆನ್ನೈ ಆಟಗಾರರ ದುರ್ವರ್ತನೆಗೆ ಕಾರಣವಾಗಿದೆ.