Thursday, December 25, 2025
Google search engine
Homeಬೆಂಗಳೂರುವಿದ್ಯುತ್ ಪ್ರವಹಿಸಿ 12 ವರ್ಷದ ಬಾಲಕ ಸೇರಿ ಇಬ್ಬರು ಸಾವು: ಬೆಂಗಳೂರಿನಲ್ಲಿ ಮಳೆಗೆ 3 ಬಲಿ!

ವಿದ್ಯುತ್ ಪ್ರವಹಿಸಿ 12 ವರ್ಷದ ಬಾಲಕ ಸೇರಿ ಇಬ್ಬರು ಸಾವು: ಬೆಂಗಳೂರಿನಲ್ಲಿ ಮಳೆಗೆ 3 ಬಲಿ!

ಮಳೆಯಿಂದ ಅಪಾರ್ಟ್ ಮೆಂಟ್ ಬೇಸ್ ಮೆಂಟ್ ನಲ್ಲಿ ತುಂಬಿದ್ದ ನೀರನ್ನು ಹೊರಹಾಕಲು ಹೋದ 12 ವರ್ಷದ ಬಾಲಕ ಸೇರಿ ಇಬ್ಬರು ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.

ಬಿಟಿಎಂ ಲೇಔಟ್ ನ 2ನೇ ಹಂತದ ಎನ್ ಎಸ್ ಪಾಳ್ಯದಲ್ಲಿ 63 ವರ್ಷದ ಮನಮೋಹನ್ ಕಾಮತ್ ಮತ್ತು 12 ವರ್ಷದ ನೇಪಾಳ ಮೂಲದ ಬಾಲಕ ದಿನೇಶ್ ಮೃತಪಟ್ಟ ದುರ್ದೈವಿಗಳು. ಈ ದುರ್ಘಟನೆಯಿಂದ ಬೆಂಗಳೂರಿನಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ. ಭಾನುವಾರ ಬೆಳಿಗ್ಗೆ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದರು.

ಮಧುವನ ಅಪಾರ್ಟ್ ಮೆಂಟ್ ನಲ್ಲಿ ಈ ದುರ್ಘಟನೆ ಸಂಭವಿಸಿದ ಬೆನ್ನಲ್ಲೇ ಅಪಾರ್ಟ್ ಮೆಂಟ್ ನ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಜಲಾವೃತಗೊಂಡಿದ್ದ ಅಪಾರ್ಟ್ ಮೆಂಟ್ ನ ನೆಲಮಹಡಿಯಲ್ಲಿ ನೀರು ಹೊರಹಾಕಲು ಮೋಟಾರು ಬಳಸಿದ್ದರು. ಇಬ್ಬರು ನೀರಿನಲ್ಲಿ ನಿಂತಿದ್ದರಿಂದ ಮೋಟಾರಿನ ಕರೆಂಟ್ ಹೊಡೆದು ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಒಂದೇ ದಿನ 104 ಮೀ.ನಷ್ಟು ಮಳೆಯಾಗಿದ್ದು, ಬಹುತೇಕ ಬಡಾವಣೆಗಳು ಜಲಾವೃತಗೊಂಡಿದ್ದು, ಹಲವು ಕಡೆ ತೊಂದರೆಗಳು ಉಂಟಾಗಿವೆ.

ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದು, ಮಳೆಯ ಅವಾಂತರಗಳಿಂದ ತಪ್ಪಿಸಿಕೊಳ್ಳಲು ಜನರು ಸುರಕ್ಷಿತ ಮಾರ್ಗ ಅನುಸರಿಸುವಂತೆ ಸೂಚಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments