ಗದಗ: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ 2025-26ರಲ್ಲಿ 7600 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಕಳೆದೊಂದು ದಶಕದಲ್ಲಿ ಪ್ರತಿ ವರ್ಷ ಕರ್ನಾಟಕಕ್ಕೆ 7 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಒದಗಿಸಿದ್ದು, ಸದ್ಯ 51 ಸಾವಿರ ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದರು.
ಗುರುವಾರ ಅಮೃತ ಭಾರತ್ ರೈಲ್ವೆ ಸ್ಟೇಷನ್ ಯೋಜನೆಯಡಿ 23.24 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಕಂಡ ಗದಗ ರೈಲ್ವೆ ನಿಲ್ದಾಣ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರಕಾರ ಪ್ರತಿ ವರ್ಷ 7 ಸಾವಿರ ಕೋಟಿ ರೂ. ನೀಡುವ ಮೂಲಕ ಅತ್ಯಂತ ಗರಿಷ್ಠ ಅನುದಾನ ಒದಗಿಸಿ ರಾಜ್ಯದ ರೈಲ್ವೆ ಯೋಜನೆಗೆ ವೇಗ ನೀಡಿದೆ ಎಂದರು.
2014 ರಲ್ಲಿ ದೇಶದಲ್ಲಿ 21-22 ಸಾವಿರ ಕಿ.ಮೀ. ರೈಲ್ವೆ ಮಾರ್ಗ ವಿದ್ಯುದ್ದೀಕರಣ ಆಗಿತ್ತು. ಸದ್ಯ 69 ಸಾವಿರ ಕಿ.ಮಿ. ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ. ಕೇವಲ ದಶಕದ ಅವಧಿಯಲ್ಲಿ 40 ಸಾವಿರ ಕಿ.ಮೀ. ವಿದ್ಯುದ್ದೀಕರಣ ಮಾಡಿರುವುದು ದಾಖಲೆ ಮಾತ್ರವಲ್ಲದೇ ಜಗತ್ತಿನಲ್ಲಿಯೇ ರೈಲ್ವೆ ಮಾರ್ಗ ವಿದ್ಯುದ್ದೀಕರಣ ಹೊಂದಿದ ರಾಷ್ಟ್ರಗಳಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಎಂದರು.
ರೈಲ್ವೆಗಳ ವಿದ್ಯುದ್ದೀಕರಣದಿಂದ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಡಿಸೇಲ್ ಮೇಲಿನ ಅವಲಂಬನೆ ಹಾಗೂ ವಾಯು ಮಾಲಿನ್ಯ ಕಡಿಮೆಯಾಗಲು ಕಾರಣವಾಗಿದೆ. ಸದ್ಯ ದೇಶದ 99 ಪ್ರತಿಶತ ರೈಲುಗಳು ವಿದ್ಯುತ್‌ನಿಂದ ಒಡುತ್ತಿದ್ದು, ಈ ಪೈಕಿ ಶೇ. 50 ರಷ್ಟು ಕಲ್ಲಿದ್ದಲು ಮೂಲಕ ಉತ್ಪತ್ತಿಯಾಗುವ ವಿದ್ಯುತ್ ಬಳಕೆ ಮಾಡಲಾಗುತ್ತಿದ್ದರೆ, ಇನ್ನುಳಿದ ಶೇ.50 ರಷ್ಟು ವಿದ್ಯುತ್‌ನ್ನು ಸೋಲಾರ್, ಪವನ ವಿದ್ಯುತ್ ನಿಂದ ಪಡೆದು 640 ಕೋಟಿ ಲೀಟರ್ ಡೀಸೆಲ್ ಉಳಿತಾಯ ಮಾಡಿದ್ದೆವೆ ಎಂದರು.
ಕರ್ನಾಟಕದಲ್ಲಿ 1659 ಕಿ.ಮೀ. ಹೊಸ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಲಾಗುತ್ತಿದ್ದು, ಇದು ಶ್ರೀಲಂಕಾದ ಒಟ್ಟು ರೈಲ್ವೆ ಜಾಲಕ್ಕಿಂತ ಹೆಚ್ಚಾಗಿದೆ. ಅದೇ ರೀತಿ ರೈಲ್ವೆ ಸುರಕ್ಷಾ ಕ್ಷೇತ್ರಕ್ಕೂ ಆದ್ಯತೆ ನೀಡಿದ್ದು, ಒಟ್ಟಾರೆ 1,16,514 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ಗಂಟೆಗೆ 130 ಕಿ.ಮೀ. ವೇಗದಲ್ಲಿ ವಂದೇ ಭಾರತ್ ರೈಲುಗಳು ಓಡಾಡುತ್ತಿರುವುದು ದೇಶ ಪ್ರಗತಿ ಪಥದಲ್ಲಿ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜಸ್ಥಾನದ ಬಿಕಾನೇರ್ ರೈಲು ನಿಲ್ದಾಣದಲ್ಲಿ ವರ್ಚುವಲ್ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಮೃತ ಭಾರತ್ ಸ್ಟೇಶನ್ ಪುನರಾಭಿವೃದ್ಧಿ ಯೋಜನೆಯಡಿ ದೇಶದಲ್ಲಿ ಆಧುನಿಕ ಮೂಲ ಸೌಕರ್ಯವುಳ್ಳ ರೈಲ್ವೆ ಸೇವೆ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದರಿಂದ ದೇಶ ಹೊಸ ಪ್ರಗತಿಯತ್ತ ಸಾಗುತ್ತಿದೆ. ಪ್ರತಿ ರಾಜ್ಯದಲ್ಲಿಯೂ ಯುವಜನರಿಗೆ ಉದ್ಯೋಗ ಅವಕಾಶ ಲಭಿಸುತ್ತಿವೆ. ಅಮೃತ ಭಾರತ ಸ್ಟೇಶನ್ ಯೋಜನೆಯು ಸಂಸ್ಕೃತಿಯ ಭಾರತ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ. ರೈಲ್ವೆ ಸ್ವಚ್ಛತೆ ಹಾಗೂ ಸಂರಕ್ಷಣೆಗೆ ಸಾರ್ವಜನಿಕರ ಜವಾಬ್ದಾರಿ ಮಹತ್ತರವಾಗಿದ್ದು ಈ ಹಿನ್ನೆಲೆಯಲ್ಲಿ ರೈಲಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕಾಗಿದೆ. ಕಾರ್ಮಿಕರಿಗೆ, ಉದ್ಯಮಿದಾರರಿಗೆ, ವ್ಯಾಪಾರಸ್ಥರಿಗೆ ಸರಕು ಸಾಗಾಣಿಕೆ ಮಾಡಲು ಅತ್ಯಂತ ಕಡಿಮೆ ವೆಚ್ಚದಲ್ಲಿ ಕೈಗೆಟಕುವ ದರದಲ್ಲಿ ರೈಲ್ವೆ ಸೌಲಭ್ಯವು ದೊರಕಿದಂತಾಗಿದೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಗದಗ ರೈಲ್ಬೆ ನಿಲ್ದಾಣದ ಪುನರ್ ಅಭಿವೃದ್ಧಿ ಈ ಭಾಗದ ಕೈಗಾರಿಕೆ, ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಬಲ ತುಂಬಿದೆ. 1884 ರಲ್ಲಿ ಆರಂಭವಾದ ಗದಗ ರೈಲ್ವೆ ನಿಲ್ದಾಣಕ್ಕೆ ಭವ್ಯ ಇತಿಹಾಸವಿದೆ. ಇಂಥ ನಿಲ್ದಾಣವನ್ನು ಅಭಿವೃದ್ಧಿ ಮಾಡಿರುವುದು ಸಂತಸ ತಂದಿದೆ ಎಂದ ಅವರು, ರೈಲ್ವೆ ನಿಲ್ದಾಣದ ಅಭಿವೃದ್ಧಿ ಜೊತೆಗೆ ಗದಗ- ವಾಡಿ,
ಗದಗ- ಯಲವಗಿ ರೈಲ್ವೆ ಮಾರ್ಗ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಜೊತೆಗೆ ರಸ್ತೆ ಅಭಿವೃದ್ಧಿಗೂ ಆದ್ಯತೆ ನೀಡಿರುವುದು ವಿಕಸಿತ ಭಾರತಕ್ಕೆ ಸಾಕ್ಷಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೈರುತ್ಯ ರೈಲ್ವೆ ವಲಯದ ಪ್ರಧಾನ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ. ಶಾಸ್ತ್ರೀ, ನೈರುತ್ಯ ರೈಲ್ವೆ ವಲಯದಲ್ಲಿ ಗದಗ ರೈಲ್ವೆ ನಿಲ್ದಾಣ ಅತ್ಯಂತ ಪ್ರಮುಖವಾಗಿದೆ. ಪ್ರತಿನಿತ್ಯ ಸರಾಸರಿ 4 ಸಾವಿರ ಜನ ಸಂಚಾರ ಮಾಡುತ್ತಾರೆ. ಅಂದಾಜು 5 ಲಕ್ಷ ರೂ. ಆದಾಯವಿದೆ. ಒಟ್ಟು 23.24 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಆಗಿದೆ ಎಂದರು.
ಇದೇ ಸಂದರ್ಭದಲ್ಲಿ ಅಮೃತ ಭಾರತ್ ಸ್ಟೇಶನ್ ಯೋಜನೆಯಡಿ ಶಾಲಾ ಮಕ್ಕಳಿಗೆ ಚಿತ್ರಕಲಾ, ಪ್ರಬಂಧ, ಚರ್ಚಾಸ್ಪರ್ಧೆ ಏರ್ಪಡಿಸಲಾಗಿದ್ದು ಆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನರಗುಂದ ಶಾಸಕ ಸಿ.ಸಿ.ಪಾಟೀಲ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ರಾಜು ಕುರಡಗಿ, ವಿ.ಎಚ್.ಹಿರೇಗೌಡ್ರ, ತಾತನಗೌಡ ಪಾಟೀಲ, ಎಸ್.ಸಿ.ಸಂಶಿಮಠ, ಸಂಗಮೇಶ ದುಂದೂರ , ಹುಬ್ಬಳ್ಳಿ ವಿಭಾಗೀಯ ಸೀನಿಯರ್ ಡಿವಿಜಿನಲ್ ಪರ್ಸನಲ್ ಆಫೀಸರ್ ( ಕಾರ್ಮಿಕ ಅಧಿಕಾರಿ) ಆರ್. ಪ್ರಸಾದ , ಗಣ್ಯರು, ಹಿರಿಯರು, ರೈಲ್ವೆ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.


