ಕರಾವಳಿಯಲ್ಲಿ ಮುಂಗಾರು ಮಳೆಯ ಅಬ್ಬರಕ್ಕೆ ಮಂಗಳೂರಿನಲ್ಲಿ ಎರಡು ಮನೆಗಳ ಮೇಲೆ ಗುಡ್ಡ ಕುಸಿದಿದ್ದು, ಮಹಿಳೆ ಹಾಗೂ ಮಗು ಮೃತಪಟ್ಟಿದ್ದು, ಸತತ 9 ಗಂಟೆಗಳ ಕಾರ್ಯಾಚರಣೆಯಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ.
ಮಂಗಳೂರಿನ ಉಳ್ಳಾಲದ ಮೊಂಟೆಪದವು ಬಳಿ ಗುರುವಾರ ತಡರಾತ್ರಿ ಗುಡ್ಡ ಕುಸಿದು ಎರಡು ಮನೆ ಬಿದ್ದು ಮಹಿಳೆ ಹಾಗೂ ಮಗು ಮೃತಪಟ್ಟಿದ್ದಾರೆ. ಮನೆಯೊಳಗಿದ್ದ 6ಕ್ಕೂ ಹೆಚ್ಚು ಮಂದಿಯನ್ನು ಆವಶೇಷಗಳಗಡಿಯಿಂದ ರಕ್ಷಿಸಲಾಗಿದೆ.
ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಕುಸಿದಿದ್ದರಿಂದ ಕಾಂತಪ್ಪ ಪೂಜಾರಿ ಪತ್ನಿ ಪ್ರೇಮ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಂತಪ್ಪ ಪೂಜಾರಿ, ಸೀತಾರಾಮ ಪೂಜಾರಿ, ಅಶ್ವಿನಿ (33) ಹಾಗೂ ಮಕ್ಕಳಾದ ಆರ್ಯನ್ (3) ಹಾಗೂ ಆರುಷ್ (2) ಅವರನ್ನು ರಕ್ಷಿಸಲಾಗಿದೆ.
ಮತ್ತೊಂದೆಡೆ ದೇರಳಕಟ್ಟೆ ಕಾನಕೆರೆಯ ಗುಡ್ಡ ಕುಸಿದು 6 ವರ್ಷದ ಮಗು ಫಾತಿಮಾ ನಯೀಮಾ ಮೃತಪಟ್ಟಿದೆ. ಎನ್ ಡಿಆರ್ ಎಫ್ ಪಡೆ ಹರಸಾಹಸಪಟ್ಟು ಆವಶೇಷಗಳಗಡಿಯಿಂದ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೂ ಗಂಭೀರವಾಗಿ ಗಾಯಗೊಂಡಿದ್ದ ಮಗು ಇಹಲೋಕ ತ್ಯಜಿಸಿದೆ.
ನಿರಂತರ ಮಳೆ ಸುರಿಯುತ್ತಿರುವುದರಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಮನೆ, ಅಂಗಡಿ ಸೇರಿದಂತೆ ಹಲವು ಕಟ್ಟಡಗಳಿಗೆ ನೀರು ನುಗ್ಗಿದೆ. ಮಂಗಳೂರು ನಗರದ ರಸ್ತೆಗಳು ಕರೆಯಂತಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.


