ಪತ್ನಿಯ ಚಿತಾಭಸ್ಮ ಬಿಡಲು ಬಂದ ಪತಿ, ಪತಿಯನ್ನು ನೋಡಲು ಹೊರಟ್ಟಿದ್ದ ಪತ್ನಿ.. ಹೀಗೆ ಒಬ್ಬೊಬ್ಬರು ಒಂದೊಂದು ಉದ್ದೇಶಗಳಿಗೆ ಕನಸುಗಳನ್ನು ಹೊತ್ತು ಪ್ರಯಾಣ ಆರಂಭಿಸಿದ್ದರು. ಆದರೆ ಅವರೆಲ್ಲರ ಬದುಕು ದುರಂತ ಅಂತ್ಯದೊಂದಿಗೆ ಛಿದ್ರಗೊಂಡಿದೆ.
ಹೌದು, ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ ಜಗತ್ತನ್ನೇ ತಲ್ಲಣಗೊಳಿಸಿದೆ. 169 ಭಾರತೀಯರು 53 ಇಂಗ್ಲೆಂಡ್ ನವರು, 6 ಮಂದಿ ಪೋರ್ಚುಗಲ್ ಹಾಗೂ ಒಬ್ಬ ಕೆನಡಾ ಪ್ರಜೆ ನಿಧನರಾಗಿದ್ದಾರೆ.
ವಿಮಾನ ದುರಂತದಲ್ಲಿ ಮೃತಪಟ್ಟವರ ಕಳೆಬರವನ್ನು ಗುರುತಿಸಲೂ ಆಗದಂತಹ ಸ್ಥಿತಿಯಲ್ಲಿ ಸುಟ್ಟು ಕರಕಲಾಗಿದ್ದು, ವೈದ್ಯರು ಕುಟುಂಬದವರ ರಕ್ತದ ಮಾದರಿ ಸಂಗ್ರಹಿಸಿ ಡಿಎನ್ ಎ ಮೂಲಕ ಶವಗಳನ್ನು ಪತ್ತೆ ಹಚ್ಚಿ ಮನೆಯವರಿಗೆ ಹಸ್ತಾಂತರಿಸುತ್ತಿದ್ದಾರೆ.
ಹೀಗೆ ಮೃತಪಟ್ಟವರಲ್ಲಿ ಅಗಲಿದ ಪತ್ನಿಯ ಅಸ್ಥಿ ವಿಸರ್ಜನೆಗಾಗಿ ಭಾರತಕ್ಕೆ ಬಂದಿದ್ದ ಲಂಡನ್ ಪ್ರಜೆ ಕೂಡ ಒಬ್ಬರಾಗಿದ್ದಾರೆ.
ಅಮ್ರೇಲಿ ಜಿಲ್ಲೆಯ ಅರ್ಜುನ್‌ಭಾಯ್ ಮನುಭಾಯ್ ಪಟೋಲಿಯಾ ಎಂಬುವವರು ಕಳೆದ ಕೆಲವು ವರ್ಷಗಳಿಂದ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಲಂಡನ್‌ನಲ್ಲಿ ಸಂತೋಷದ ಜೀವನ ನಡೆಸುತ್ತಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಇತ್ತೀಚೆಗೆ, ಅರ್ಜುನ್ ಅವರ ಪತ್ನಿ ಲಂಡನ್‌ನಲ್ಲಿ ನಿಧನರಾದರು.
ಅರ್ಜುನ್‌ಭಾಯ್ ಮನುಭಾಯ್ ಅವರ ಪತ್ನಿಯ ಕೊನೆಯ ಆಸೆಯಂತೆ ಅವರ ಚಿತಾಭಸ್ಮವನ್ನು ವಿಸರ್ಜಿಸಲು ಪತ್ನಿಯ ತವರೂರಿಗೆ ಬಂದಿದ್ದರು. ತಮ್ಮ ಇಬ್ಬರು ಮಕ್ಕಳನ್ನು ಲಂಡನ್‌ನಲ್ಲಿ ಬಿಟ್ಟು ಭಾರತಕ್ಕೆ ಬಂದಿದ್ದರು.
ತವರೂರಿನಲ್ಲಿ ತಮ್ಮ ಸಂಬಂಧಿಕರ ಸಮ್ಮುಖದಲ್ಲಿ ಪತ್ನಿಯ ಅಸ್ಥಿ ವಿಸರ್ಜಿಸಿ ನಂತರ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಿ ಅವರು ಲಂಡನ್‌ಗೆ ಮರಳಿದ್ದರು. ಅದರಂತೆ ಗುರುವಾರ (ಜೂನ್ 12) ಏರ್ ಇಂಡಿಯಾ-ಎಐ 171 ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನ ಹತ್ತಿದ್ದ ಅರ್ಜುನ್ ಅಪಘಾತದಲ್ಲಿ ನಿಧನರಾಗಿದ್ದಾರೆ.
ಸೂರತ್ ನಲ್ಲಿ ವಾಸವಿರುವ ಅರ್ಜುನ್ ಕುಟುಂಬ ಈಗಾಗಲೇ ಸಾಕಷ್ಟು ನೋವು ಕಂಡಿದೆ. ಅರ್ಜುನ್ ಅವರ ಮದುವೆಗೊ ಮೊದಲೇ ಅರ್ಜುನ್ ತಂದೆ ನಿಧನರಾಗಿದ್ದರು.ಅವರ ತಾಯಿ ಸೂರತ್‌ನಲ್ಲಿ ವಾಸಿಸುತ್ತಿದ್ದಾರೆ. ಲಂಡನ್‌ನಲ್ಲಿರುವ ಇಬ್ಬರು ಮಕ್ಕಳು ಈ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.
ತಾಯಿಯ ಸಾವಿನಿಂದ ದುಃಖಿತರಾಗಿದ್ದ ಮಕ್ಕಳು ಈಗ ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಲಂಡನ್‌ನಲ್ಲಿರುವ ಅರ್ಜುನ್‌ಭಾಯ್ ಅವರ ಮಕ್ಕಳ ಭವಿಷ್ಯದ ಬಗ್ಗೆ ಕುಟುಂಬ ಸದಸ್ಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಇಬ್ಬರೂ ಪೋಷಕರು ಸತ್ತ ನಂತರ ಅವರನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಚರ್ಚಿಸುತ್ತಿದ್ದೇವೆ ಎಂದು ಅರ್ಜುನ್ ಅವರ ಸಂಬಂಧಿ ತಿಳಿಸಿದ್ದಾರೆ.
ಮೊದಲ ಬಾರಿ ಗಂಡನನ್ನು ನೋಡಲು ಹೊರಟ್ಟಿದ್ದ ಮಹಿಳೆ ಬಲಿ
ಮತ್ತೊಂದೆಡೆ ವಿವಾಹದ ಬಳಿಕ ಗಂಡನ ಜೊತೆಗಿರಲು ಮೊದಲ ಬಾರಿ ಲಂಡನ್‌ಗೆ ಹೊರಟಿದ್ದ ನವವಿವಾಹಿತೆ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.
ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್‌ಪುರೋಹಿತ್ ಮೃತ ಮಹಿಳೆ.
ಜನವರಿಯಲ್ಲಿ ಖುಷ್ಬೂ ಹಾಗೂ ಮನ್ಫೂಲ್ ಸಿಂಗ್ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಅವರ ಪತಿ ಲಂಡನ್‌ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ಹೀಗಾಗಿ ಖುಷ್ಬೂ ಲಂಡನ್‌ನಲ್ಲಿದ್ದ ಗಂಡನನ್ನು ನೋಡಲು ಹೊರಟಿದ್ದರು.
ಮಗಳನ್ನು ಏರ್‌ಪೋರ್ಟ್‌ಗೆ ಬಿಟ್ಟು, ಆಕೆಯನ್ನು ಕಳುಹಿಸಿಕೊಟ್ಟಿದ್ದ ತಂದೆ ಮದನ್ ಸಿಂಗ್ ಅವರು, ಆಶೀರ್ವಾದ ಮಗಳೇ ಎಂದು ವಾಟ್ಸಪ್ ಸ್ಟೇಟಸ್ ಹಾಕಿ ಕಳುಹಿಸಿಕೊಟ್ಟಿದ್ದರು. ಆದರೆ ದುರದೃಷ್ಟವಶಾತ್ ವಿಮಾನ ದುರಂತದಲ್ಲಿ ಮಗಳು ಅಸುನೀಗಿದ್ದಾರೆ.


