ಆರಂಭಿಕ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಮೊದಲ ಟೆಸ್ಟ್ ಪಂದ್ಯ ಕುತೂಹಲದತ್ತ ದಾಪುಗಾಲಿರಿಸಿದೆ.
ಲೀಡ್ಸ್ ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಕೆಎಲ್ ರಾಹುಲ್ ಶತಕ ಸಂಪಾದಿಸಿದರು. ಇದು ಅವರಿಗೆ 9ನೇ ಟೆಸ್ಟ್ ಶತಕವಾಗಿದೆ.
ಮೊದಲ ಇನಿಂಗ್ಸ್ ನಲ್ಲಿ ಕೇವಲ 6 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಸೋಮವಾರ 3 ವಿಕೆಟ್ ಗೆ 234 ರನ್ ಗಳಿಸಿದ್ದು, ಒಟ್ಟಾರೆ 240 ರನ್ ಮುನ್ನಡೆ ಸಾಧಿಸಿದಂತಾಗಿದೆ.
ಕೆಎಲ್ ರಾಹುಲ್ 202 ಎಸೆತಗಳಲ್ಲಿ 13 ಬೌಂಡರಿಯೊಂದಿಗೆ ಶತಕ ಪೂರೈಸಿದರು. ರಾಹುಲ್ ಗೆ ಉತ್ತಮ ಬೆಂಬಲ ನೀಡಿದ ರಿಷಭ್ ಪಂತ್ 82 ರನ್ ಬಾರಿಸಿ ಅಜೇಯರಾಗಿ ಉಳಿಯುವ ಮೂಲಕ ಮತ್ತೊಂದು ಶತಕದ ದಾಪುಗಾಲಿರಿಸಿದ್ದಾರೆ.
ಭಾರತ ತಂಡ ಒಂದು ಹಂತದಲ್ಲಿ 92 ರನ್ ಗೆ 3 ವಿಕೆಟ್ ಕಳೆದುಕೊಂಡು ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ರಾಹುಲ್ ಮತ್ತು ಪಂತ್ 140 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ರಾಹುಲ್ ಮೊದಲ ಇನಿಂಗ್ಸ್ ನಲ್ಲಿ 42 ರನ್ ಗಳಿಸಿದರೆ, ಪಂತ್ ಶತಕ ಸಿಡಿಸಿದ್ದರು.


