ವೃದ್ಧಾಶ್ರಮಕ್ಕೆ ಸೇರಿಸಿದ್ದರಿಂದ ನೊಂದ ವೃದ್ದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೆಪಿ ನಗರದ 8ನೇ ಅಡ್ಡರಸ್ತೆಯಲ್ಲಿರುವ ಕಮಲಮ್ಮ ಅಂಡ್ ರಾಮಕೃಷ್ಣಪ್ಪ ವೃದ್ಧಾಶ್ರಮದಲ್ಲಿ ಕೃಷ್ಣಮೂರ್ತಿ (81) ಮತ್ತು ರಾಧಾ (74) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೊಸೆ ಜೊತೆ ಹೊಂದಾಣಿಕೆ ಆಗದ ಕಾರಣ ಮಗ ಒಂದು ತಿಂಗಳ ಹಿಂದೆಯಷ್ಟೇ ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಮಗ ವೃದ್ಧಾಶ್ರಮಕ್ಕೆ ಸೇರಿಸಿದ್ದರಿಂದ ನೊಂದಿದ್ದ ದಂಪತಿ ಮಂಗಳವಾರ ರಾತ್ರಿ ಊಟ ಮಾಡಿ ಮಲಗಲು ಕೋಣೆಗೆ ಹೋದಾಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2021ರಲ್ಲಿ ಬ್ಯಾಟರಾಯನಪುರದಲ್ಲಿ ವೃದ್ಧಾಶ್ರಮಕ್ಕೆ ಮಗ ಸೇರಿಸಿದ್ದ. ಆದರೆ 2023ರಲ್ಲಿ ಮತ್ತೆ ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ ಸೊಸೆ ಜೊತೆ ಹೊಂದಾಣಿಕೆ ಕೊರತೆ ಬಂದಿದ್ದರಿಂದ ದಂಪತಿ ಬೇರೆ ಮನೆ ಮಾಡುವಂತೆ ಕೇಳಿಕೊಂಡಿದ್ದರು.
ಮಗ ಬೇರೆ ಮನೆ ಮಾಡುವ ಬದಲು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದ. ಇದರಿಂದ ನೊಂದುಕೊಂಡ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


