ಬೆಂಗಳೂರು ಹೊರವಲಯದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ 103 ಮಂದಿಯ ರಕ್ತದ ಮಾದರಿಯ ಪರೀಕ್ಷೆಯ ವರದಿ ಬಂದಿದ್ದು, ಇದರಲ್ಲಿ 59 ಪುರುಷರು ಹಾಗೂ 27 ಮಹಿಳೆಯರು ನಿಷೇಧಿತ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.
ಎಲೆಕ್ಟ್ರಾನಿಕ್ ಸಿಟಿಯ ಸಿಂಗೇನಾ ಅಗ್ರಹಾರದಲ್ಲಿನ `ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ’ ಹೆಸರಿನಲ್ಲಿ ಜಿಎಂ ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಸಿನಿಮಾ ನಟ-ನಟಿಯರು ಸೇರಿದಂತೆ ಹಲವಾರು ಮಂದಿ ಸಿಕ್ಕಿಬಿದ್ದಿದ್ದರು.
ರೇವ್ ಪಾರ್ಟಿಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಣ್ಯರ ಮಕ್ಕಳು ಅಲ್ಲದೇ ನಟಿ ಹೇಮಾ, ಆಶಿ ರಾಯ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು. ಇದರಲ್ಲಿ ಹೇಮಾ ಅವರು ಕೂಡ ಉದ್ದೀಪನ ಮದ್ದು ಸೇವಿಸಿರುವುದು ಕೂಡ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಪಾರ್ಟಿಯಲ್ಲಿ 73 ಪುರುಷರು ಮತ್ತು 30 ಮಹಿಳೆಯರು ಪಾಲ್ಗೊಂಡಿದ್ದರು. ಪೊಲೀಸರು ಖಾಸಗಿ ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದವರ ರಕ್ತದ ಮಾದರಿ ಪರೀಕ್ಷೆಗೆ ನೀಡಿದ್ದು, 59 ಪುರುಷರು ಹಾಗೂ 27 ಮಹಿಳೆಯರು ನಿಷೇಧಿತ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.
ಕರ್ನಾಟಕದ ಕ್ರೈಂ ಬ್ರಾಂಚ್ ಪೊಲೀಸರು ದಾಳಿಯ ವೇಳೆ 14.4 ಗ್ರಾಂ ಎಂಡಿಎಂ ಪಿಲ್ಸ್, 1.16 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, 6 ಗ್ರಾಂ ಹೈಡ್ರೊ ಕ್ಯಾನಿಬಲ್ಸ್, 5 ಗ್ರಾಂ ಕೊಕೈನ್, ಕೊಕೈನ್ ಸವರಿದ 500 ಮುಖಬೆಲೆಯ ನೋಟುಗಳು, 5 ಗ್ರಾಂ ಹೈಡ್ರೊ ಗಾಂಜಾ, 5 ಮೊಬೈಲ್, ಲ್ಯಾಂಡ್ ಲೋವರ್, ಡಿಜೆ ಉಪಕರಣ ಮುಂತಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.