ಡೆಹ್ರಾಡೂನ್: ಧಾರ್ಮಿಕ ಕ್ಷೇತ್ರಗಳಲ್ಲಿ ನಕಲಿ ಬಾಬಾಗಳ ವಿರುದ್ಧ ಉತ್ತರಾಖಂಡ ಸರ್ಕಾರ ʼಆಪರೇಷನ್ ಕಾಲನೇಮಿʼ ಕಾರ್ಯಾಚರಣೆ ನಡೆಸಿ 82 ನಕಲಿ ಬಾಬಾಗಳನ್ನು ಬಂಧಿಸಿದೆ.
ಚಾರ್ ಧಾಮ್ ಯಾತ್ರೆ ಮತ್ತು ಕನ್ವರ್ ಯಾತ್ರೆ ವೇಳೆ ಧಾರ್ಮಿಕ ಕ್ಷೇತ್ರಗಳಲ್ಲಿ ನಕಲಿ ಬಾಬಾಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 82 ನಕಲಿ ಬಾಬಾಗಳನ್ನು ಬಂಧಿಸಿದ್ದಾರೆ.
ಆಪರೇಷನ್ ಕಾಲನೇಮಿ ಹೆಸರಿನಲ್ಲಿ ಉತ್ತರಾಖಂಡ್ ಪೊಲೀಸರು ಮೂರು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಜನರನ್ನು ವಂಚಿಸುತ್ತಿದ್ದ 82 ಮಂದಿ ನಕಲಿ ಬಾಬಾಗಳನ್ನು ಬಂಧಿಸಿದ್ದಾರೆ. ಭಾನುವಾರ ಬಂಧಿಸಿದ 34 ನಕಲಿ ಬಾಬಾಗಳ ಪೈಕಿ 23 ಮಂದಿ ಹೊರರಾಜ್ಯದ ನಿವಾಸಿಗಳಾಗಿದ್ದಾರೆ.
ಬಂಧಿತ ನಕಲಿ ಬಾಬಾಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಜನರ ಭಾವನೆಗಳ ಜೊತೆ ಆಟವಾಡುವ ಇಂತಹ ವಂಚಕರನ್ನು ಸೆರೆಹಿಡಿಯಲು ತಂಡವನ್ನು ರಚಿಸಲಾಗಿದ್ದು, ನಕಲಿ ಬಾಬಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಎಸ್ಪಿ ಅಜಯ್ ಸಿಂಗ್ ತಿಳಿಸಿದ್ದಾರೆ.


