ಲೀಗ್ ನಲ್ಲಿ ಅಗ್ರಸ್ಥಾನ ಪಡೆದಿದ್ದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಭಾನುವಾರ ನಡೆಯಲಿರುವ ಐಪಿಎಲ್ ಟಿ-20 ಟೂರ್ನಿಯ ಫೈನಲ್ ನಲ್ಲಿ ಮುಖಾಮುಖಿ ಆಗಲಿವೆ.
ಚೆನ್ನೈನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 36 ರನ್ ಗಳಿಂದ ಮಣಿಸಿದ ಸನ್ ರೈಸರ್ಸ್ ಹೈದರಾಬಾದ್ 3ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 19 ಓವರ್ ಗಳಲ್ಲಿ 7 ವಿಕೆಟ್ ಗೆ 134 ರನ್ ಗೆ ಆಲೌಟಾಯಿತು. ಈ ಸೋಲಿನೊಂದಿಗೆ ರಾಜಸ್ಥಾನ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ರಾಜಸ್ಥಾನ್ ರಾಯಲ್ಸ್ ಪರ ಧ್ರುವ ಜುರೆಲ್ (ಅಜೇಯ 56 ರನ್, 35 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಯಶಸ್ವಿ ಜೈಸ್ವಾಲ್ (42 ರನ್, 21 ಎಸೆತ, 4 ಬೌಂಡರಿ, 3 ಸಿಕ್ಸರ್) ಮಾತ್ರ ತಕ್ಕಮಟ್ಟಿಗೆ ಹೋರಾಟ ನಡೆಸಿದ್ದು ಬಿಟ್ಟರೆ ಉಳಿದವರಿಂದ ದೊಡ್ಡ ಕಾಣಿಕೆ ಬರಲಿಲ್ಲ.
ಹೈದರಾಬಾದ್ ಪರ ಶಹಬಾಜ್ ಅಹ್ಮದ್ 3, ಅಭಿಷೇಕ್ ಶರ್ಮ 2, ಪ್ಯಾಟ್ ಕಮಿನ್ಸ್ ಮತ್ತು ನಟರಾಜನ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಹೈದರಾಬಾದ್ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ (50 ರನ್, 34 ಎಸೆತ, 4 ಸಿಕ್ಸರ್) ತಂಡವನ್ನು ಆಧರಿಸಿದರು. ಟ್ರಾವಿಸ್ ಹೆಡ್ (34), ರಾಹುಲ್ ತ್ರಿಪಾಠಿ (37) ಮತ್ತು ಶಹಬಾದ್ ಅಹ್ಮದ್ (17) ಉಪಯುಕ್ತ ಕಾಣಿಕೆ ನೀಡಿದರು.