ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 17ನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಈ ಮೂಲಕ ಎರಡು ಬಾರಿ ಆರೆಂಜ್ ಕ್ಯಾಪ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಆರ್ ಸಿಬಿ ತಂಡದ ಅಮೋಘ ಪ್ರದರ್ಶನದಿಂದ ಪ್ಲೇಆಫ್ ಪ್ರವೇಶಿಸಿ ಅಚ್ಚರಿ ಮೂಡಿಸಿತ್ತು. ಪ್ಲೇಆಫ್ ನಲ್ಲಿ ಸೋಲುಂಡರೂ ತಂಡದ ಸಾಧನೆ ಹಿಂದೆ ಕೊಹ್ಲಿ ಅವರ ಪ್ರದರ್ಶನ ಗಮನ ಸೆಳೆಯಿತು. ಕೊಹ್ಲಿ 15 ಪಂದ್ಯಗಳಲ್ಲಿ 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 154.69ರ ಸರಾಸರಿಯಲ್ಲಿ 741 ರನ್ ಗಳಿಸಿದರು.
ಐಪಿಎಲ್ 2024ರಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್ 35 ವರ್ಷದ ಕೊಹ್ಲಿ ಪಾಲಾಯಿತು. ಕೊಹ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆರೆಂಜ್ ಕ್ಯಾಪ್ ಪಡೆದ ಮೂರನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಅಲ್ಲದೇ ಎರಡು ಬಾರಿ ಆರೇಂಜ್ ಕ್ಯಾಪ್ ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.
ವಿಶೇಷ ಅಂದರೆ ಕೊಹ್ಲಿ 741 ರನ್ ಗಳಿಸಿದರೆ ಐಪಿಎಲ್ ನ ಯಾವುದೇ ಆಟಗಾರ 600ರ ಗಡಿ ಕೂಡ ದಾಟಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ 14 ಪಂದ್ಯಗಳಿಂದ 583 ರನ್ ಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದರು. ಅಂದರೆ ಕೊಹ್ಲಿ 158 ರನ್ ಗಳ ಮುನ್ನಡೆ ಪಡೆದು ಆರೆಂಜ್ ಕ್ಯಾಪ್ ಪಡೆದರು.
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅತೀ ಹೆಚ್ಚು 3 ಬಾರಿ (2015, 2017, 2019) ಆರೆಂಜ್ ಕ್ಯಾಪ್ ಪಡೆದಿದ್ದರೆ, ಆರ್ ಸಿಬಿ ತಂಡದಲ್ಲಿ ಆಡಿದ್ದ ಕ್ರಿಸ್ ಗೇಲ್ 2 ಬಾರಿ (2011, 2012) ಮತ್ತು ವಿರಾಟ್ ಕೊಹ್ಲಿ (2016, 2024) ಎರಡು ಬಾರಿ ಅತೀ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.