ಕೋಲ್ಕತಾ ನೈಟ್ ರೈಡರ್ಸ್ ತಂಡ 3ನೇ ಬಾರಿ ಐಪಿಎಲ್ ಟಿ-20 ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ 20 ಕೋಟಿ ರೂ. ಬಹುಮಾನ ಮೊತ್ತವನ್ನು ಜೇಬಿಗಿಳಿಸಿಕೊಂಡಿದೆ.
ಭಾನುವಾರ ನಡೆದ ಐಪಿಎಲ್ ಫೈನಲ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ 8 ವಿಕೆಟ್ ಗಳ ಭಾರೀ ಅಂತರದಿಂದ ಗೆದ್ದು 10 ವರ್ಷಗಳ ನಂತರ ಪ್ರಶಸ್ತಿ ಎತ್ತಿ ಹಿಡಿಯಿತು. ಈ ಬಾರಿ ಟೂರ್ನಿಯಲ್ಲಿ ಸಂಗ್ರಹವಾದ 45 ಕೋಟಿ ರೂ.ವನ್ನು ತಂಡಗಳ ಬಹುಮಾನ ಮೊತ್ತವನ್ನು ಹಂಚಲಾಯಿತು.
ರನ್ನರ್ ಅಪ್ ಸ್ಥಾನ ಪಡೆದ ಸನ್ ರೈಸರ್ಸ್ ಹೈದರಾಬಾದ್ ತಂಡ 13 ಕೋಟಿ ರೂ. ಬಹುಮಾನ ಮೊತ್ತ ಗಳಿಸಿತು. ಟೂರ್ನಿಯಲ್ಲಿ 3ನೇ ಸ್ಥಾನ ಪಡೆದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 7 ಕೋಟಿ ರೂ. ಲಭಿಸಿದೆ.
ಲೀಗ್ ನಲ್ಲಿ ಅಮೋಘ ಪ್ರದರ್ಶನ ನೀಡಿ 4ನೇ ಸ್ಥಾನ ಪಡೆದಿದ್ದ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6.5 ಕೋಟಿ ರೂ. ಬಹುಮಾನ ಮೊತ್ತ ಪಡೆದಿದೆ. ಆರ್ ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಹೆಚ್ಚು ವಿಕೆಟ್ ಪಡೆದ (24) ಹರ್ಷಲ್ ಪಟೇಲ್ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಜೊತೆಗೆ ತಲಾ 10 ಲಕ್ಷ ರೂ. ಬಹುಮಾನ ಮೊತ್ತ ಗಳಿಸಿದರು.
ಮೌಲ್ಯಯುತ ಆಟಗಾರ ಪ್ರದರ್ಶನ ನೀಡಿದ ಕೆಕೆಆರ್ ತಂಡದ ಸುನೀಲ್ ನರೇನ್ 12 ಲಕ್ಷ ರೂ. ಬಹುಮಾನ ಮೊತ್ತ ಗಳಿಸಿದರು.