ರಷ್ಯಾದಲ್ಲಿ ಕೆಲವೇ ದಿನಗಳ ಅಂತರದಲ್ಲಿ ಮತ್ತೊಮ್ಮೆ7.0 ತೀವ್ರತೆಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಸುನಾಮಿ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಕುರಿಲ್ ದ್ವೀಪದ ಬಳಿ ಭಾನುವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದ್ದು, ಸುನಾಮಿ ಅಲೆಗಳು ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡರೂ ಸಮುದ್ರ ತೀರದ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವುದು ಉತ್ತಮ ಎಂದು ರಷ್ಯಾದ ತುರ್ತು ಸೇವೆಗಳ ಸಚಿವಾಲಯ ನಾಗರಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಕಮ್ಚಟ್ಕಾ ಕಡಲ ತೀರದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ 8.8 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇದರಿಂದ ಸೃಷ್ಟಿಯಾದ ಸುನಾಮಿ ಅಲೆಗಳು ದೂರದ ಮೂರು ರಾಷ್ಟ್ರಗಳಿಗೆ ತಲುಪಿತ್ತು. ಯಾವುದೇ ದೊಡ್ಡ ಪ್ರಮಾಣದಲ್ಲಿ ಸಾವು ನೋವು ಸಂಭವಿಸದೇಇದ್ದರೂ ಜಾಗತಿಕ ಮಟ್ಟದಲ್ಲಿ ಭಾರೀ ಅತಂಕ ಸೃಷ್ಟಿಸಿತ್ತು.
ಭಾನುವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದ್ದರೆ, ಶನಿವಾರ ತಡರಾತ್ರಿ ರಷ್ಯಾದ ಕಮ್ಚಟ್ಕಾದ ಕೃಶನಿನಿಕೊವ್ ಬಳಿಯ 600 ವರ್ಷಗಳ ನಂತರ ಇದೇ ಮೊದಲ ಬಾರಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಜ್ವಾಲಾಮುಖಿ ಸ್ಫೋಟದ ಪರಿಣಾಮ ಭೂಕಂಪನ ಸೃಷ್ಟಿಯಾಗಿದೆಯೋ ಅಥವಾ ಭೂಕಂಪನದಿಂದ ಜ್ವಾಲಾಮುಖಿ ಕಾಣಿಸಿಕೊಂಡಿದೆಯೋ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಕುರ್ಲಿ ದ್ವೀಪ ವಲಯದಿಂದ ೧೧೮ ಕಿ.ಮೀ. ದೂರದ ಸೆವೆರೊ-ಕುರ್ಲಿ ಪ್ರದೇಶದಲ್ಲಿರುವ ಜ್ವಾಲಾಮುಖಿ ಸ್ಫೋಟದಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ಸಂಭವಿದ ೮.೮ ತೀವ್ರತೆಯ ಭೂಕಂಪನದ ಪರಿಣಾಮ ಈ ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ.


