ಗುಜರಾತ್ ಸರ್ಕಾರವನ್ನು ನಾವು ಈಗ ನಂಬುವುದಿಲ್ಲ ಎಂದು ರಾಜ್ ಕೋಟ್ ನ ಕ್ರೀಡಾ ವಲಯದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ಛೀಮಾರಿ ಹಾಕಿದೆ.
ರಾಜ್ ಕೋಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 9 ಮಕ್ಕಳು ಸೇರಿದಂತೆ 28 ಮಂದಿ ಮೃತಪಟ್ಟಿದ್ದು, ಹಲವು ದೇಹಗಳನ್ನು ಗುರುತಿಸಲಾಗದಷ್ಟು ಕರಕಲಾಗಿವೆ. ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಎರಡನೇ ಅಗ್ನಿ ದುರಂತ ಇದಾಗಿದೆ.
ನಗರದಲ್ಲಿ ಸಂಭವಿಸಿದ ಎರಡೂ ಅಗ್ನಿ ದುರಂತ ಪ್ರಕರಣಗಳಲ್ಲಿ ಯಾವುದೇ ಸುರಕ್ಷತಾ ಮಾನದಂಡ ಅನುಸರಿಸಲಾಗಿಲ್ಲ. ಅಲ್ಲದೇ ಸಂಬಂಧಪಟ್ಟ ಇಲಾಖೆಗಳಿಂದ ಪ್ರಮಾಣಪತ್ರ ಪಡೆಯದೇ 24 ತಿಂಗಳಿಂದ ಕಾರ್ಯಚರಿಸುತ್ತಿದ್ದವು.
ಪರವಾನಗಿ ಪಡೆಯದೇ ಸಂಸ್ಥೆ ನಡೆಸಲಾಗುತ್ತಿತ್ತು ಎಂದು ಸ್ಥಳೀಯ ಸಂಸ್ಥೆಗಳ ವರದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದ ಗುಜರಾತ್ ಸರ್ಕಾರದ ಆಡಳಿತವನ್ನು ನಾವು ಇನ್ನೂ ನಂಬುವುದಿಲ್ಲ ಎಂದು ಖಾರವಾಗಿ ಹೇಳಿದೆ.
ಸುಮಾರು ಎರಡೂವರೆ ವರ್ಷದಿಂದ ಯಾವುದೇ ಪರವಾನಗಿ ಇಲ್ಲದೇ ನಡೆಯುತ್ತಿತ್ತು ಎಂದರೇ ನಂಬಲು ಸಾಧ್ಯವೇ? ನಿಮ್ಮ ಸರ್ಕಾರ ಹಾಗೂ ಬೆಂಬಲಿಗರು ಏನು ಮಾಡುತ್ತಿದ್ದವು. ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದರೂ ಎಲ್ಲರೂ ಕಣ್ಮುಚ್ಚಿ ಕುಳಿತಿದ್ದರಾ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಇದೇ ವೇಳೆ ರಾಜ್ಯ ಸರ್ಕಾರವನ್ನು ಮುಲಾಜಿಲ್ಲದೇ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ನೀವು ಏನು ಕಣ್ಮುಚ್ಚಿ ಕುಳಿತಿದ್ದಿರಾ? ಅಥವಾ ನಿದ್ದೆ ಮಾಡುತ್ತಿದ್ದಿರಾ? ನಿಮ್ಮ ಆಡಳಿತ ವ್ಯವಸ್ಥೆಯ ಮೇಲೆ ಯಾರೂ ನಂಬಿಕೆ ಇಟ್ಟುಕೊಳ್ಳುವಂತಿಲ್ಲ ಎಂದು ಕೋರ್ಟ್ ಹೇಳಿದೆ.