ಸಾಲ ಮಾಡಿ ಸಂಕಷ್ಟದಲ್ಲಿದ್ದ ಗೆಳತಿಗೆ ಸಹಾಯ ಮಾಡಲು ಗಂಡ ಮಾಡಿಸಿಕೊಟ್ಟ ಒಡವೆಗಳನ್ನು ದರೋಡೆ ಮಾಡಲಾಗಿದೆ ಎಂದು ನಾಟಕವಾಡಿದ ಪತ್ನಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಮನ್ಸಲಾಪುರ ಗ್ರಾಮದ ಹೂವಿನ ತೋಟದ ಆಂಜಕನೇಯ ದೇವಸ್ಥಾನದ ಬಳಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದ್ದು, ದರೋಡೆಯಲ್ಲಿ ಚಿನ್ನಾಭರಣ ಕಳುವಾಗಿದೆ ಎಂದು ದೂರು ನೀಡಿದ್ದ ಮಹಿಳೆಯೇ ಈ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.
ದರೋಡೆ ನಾಟಕವಾಡಿದ ಸ್ನೇಹಿತೆಯರಾದ ರಾಜೇಶ್ವರಿ ಮತ್ತು ರೇಣುಕಾ ದರೋಡೆ ನಾಟಕವಾಡಿದ ಆರೋಪಿಗಳು.
ರಾಜೇಶ್ವರಿ ಪತಿಯಿಂದ ರೇಣುಕಾ 10 ಲಕ್ಷ ರೂ. ಸಾಲ ಪಡೆದಿದ್ದಳು. ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ರೇಣುಕಾ 20 ಸಾವಿರ ನೀಡಬೇಕಿತ್ತು. ರೇಣುಕಾ ಕೆಲ ತಿಂಗಳು ಬಡ್ಡಿ ನೀಡಿದ್ದಳು. ಆದರೆ ಇತ್ತೀಚೆಗೆ ಬಡ್ಡಿ ನೀಡಲು ಸಾಧ್ಯವಾಗದೇ ಮನೆ ಮಾರಿ ಸಾಲ ತೀರಿಸುವುದಾಗಿ ರಾಜೇಶ್ವರಿ ಮುಂದೆ ಹೇಳಿದ್ದಳು. ಆಗ ರಾಜೇಶ್ವರಿ ಮತ್ತು ಉಳಿದ ಸ್ನೇಹಿತರು ಮನೆ ಮಾರಬೇಡ ಎಂದು ಸಲಹೆ ನೀಡಿ, ದರೋಡೆ ಕಥೆ ಕಟ್ಟಿದ್ದರು.
ರಾಜೇಶ್ವರಿ ಮತ್ತು ಇವರ ಸ್ನೇಹಿತೆ ರೇಣುಕಾ ಹಾಗೂ ಇತರೆ ಮಹಿಳೆಯರು ಜೊತೆಯಾಗಿ ಆಟೋದಲ್ಲಿ ಮೇ 24 ರಂದು ರಾಯಚೂರು ತಾಲೂಕಿನ ಮನ್ಸಲಾಪುರ ಗ್ರಾಮದ ಹೊರಭಾಗದಲ್ಲಿರುವ ಹೋವಿನ ತೋಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದರು.
ಹೀಗೆ ಹೋದವರು ಕೆಲ ಸಮಯದಲ್ಲಿ ಏಕಾಏಕಿ ಕಿರುಚಾಡುತ್ತಾ ಓಡೋಡಿ ಬಂದರು. ಇಲ್ಲಿದ್ದಂತಹ ಜನರ ಬಳಿ ಅಳುತ್ತ, ಕಿರುಚಾಡುತ್ತಾ “ಬೈಕ್ನಲ್ಲಿ ಬಂದಿದ್ದ ಇಬ್ಬರು ಬಟನ್ ಚಾಕು ತೆಗೆದು ನಮ್ಮ ಕತ್ತಿಗೆಗೆ ಇಟ್ಟರು. ಕಿರುಚಾಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದರು.
ನನ್ನ (ರಾಜೇಶ್ವರಿ) ಮೈಲೇಲಿದ್ದ ಬೆಂಡೋಲೆ, ಚಿನ್ನದ ಸರ, ಬ್ರಾಸ್ಲೆಟ್ಸೇರಿ ಸುಮಾರು 100 ಗ್ರಾಂ ಚಿನ್ನಾಭರಣ ಕಿತ್ತುಕೊಂಡು ಹೋದರು. ನನ್ನ (ರೇಣುಕಾ) ಅರ್ಧ ತೊಲೆ ಬಂಗಾರ ಕದ್ದು ಪರಾರಿಯಾದರು” ಎಂದು ರಾಜೇಶ್ವರಿ ಮತ್ತು ರೇಣುಕಾ ಹೇಳಿದ್ದಾರೆ.
ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ. ಬಳಿಕ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿಕೊಂಡರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಅಸಲಿ ಸತ್ಯ ಹೊರ ಬಂದಿದೆ. ರಾಜೇಶ್ವರಿ ಮತ್ತು ರೇಣುಕಾ ಆಡಿದ ಬಯಲು ನಾಟಕ ತಿಳಿದಿದೆ.
ಬಹಿರ್ದೆಸೆಗೆ ಹೋದಾಗ ನಡೆದ ಅಸಲಿ ಘಟನೆ ರಾಜೇಶ್ವರಿ ಮತ್ತು ರೇಣುಕಾ ಬಹಿರ್ದೆಸೆಗೆ ಹೋಗುವ ನಾಟವಾಡಿ, ಅಲ್ಲಿಗೆ ರಾಜೇಶ್ವರಿ ತನ್ನ ಪುತ್ರನನ್ನು ಕರೆಸಿಕೊಳ್ಳುತ್ತಾಳೆ. ಅಲ್ಲಿ ಇಬ್ಬರು ತಮ್ಮ ಮೈಲಿನ ಒಡವೆಗಳನ್ನು ಬಿಚ್ಚಿ ಆತನ ಕೈಗೆ ಕೊಡುತ್ತಾರೆ. ಬಳಿಕ ನಮ್ಮ ಒಡವೆಗಳನ್ನು ದರೋಡೆ ಮಾಡಿದರು ಅಂತ ನಾಟಕವಾಡಲು ಆರಂಭಿಸಿದ್ದಾರೆ.