ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿನ್ ತೆಂಡೂಲ್ಕರ್ ಸೇರಿದಂತೆ 3000 ಅರ್ಜಿಗಳು ಬಂದಿವೆ!
ಹೌದು, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಗುತ್ತಿಗೆ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಅರ್ಜಿ ಆಹ್ವಾನಿಸಿತ್ತು.
ಅರ್ಜಿ ಸಲ್ಲಿಕೆಗೆ ಭಾನುವಾರ ಕೊನೆಯ ದಿನವಾಗಿದ್ದು, ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೋಚ್ ಗೌತಮ್ ಗಂಭೀರ್ ಕೋಚ್ ಆಗಲಿದ್ದಾರೆ ಎಂಬ ವದಂತಿ ಹರಡಿದೆ. ಇದರ ನಡುವೆ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಕೆಯ ವಿವರಗಳನ್ನು ಬಿಸಿಸಿಐ ಬಿಡುಗಡೆ ಮಾಡಿದೆ
ಇದೇ ಮೊದಲ ಬಾರಿ ಕೋಚ್ ಸ್ಥಾನಕ್ಕೆ ಸಾರ್ವಜನಿಕವಾಗಿ ಅರ್ಜಿ ಆಹ್ವಾನಿಸಿದ್ದರಿಂದ 3000ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರ ಹೆಸರಗಳಲ್ಲಿ ಕೂಡ ಅರ್ಜಿಗಳು ಬಂದಿವೆ.
ದೇಶದ ಗಣ್ಯರು ಹಾಗೂ ರಾಜಕಾರಣಿಗಳ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ವೀರೇಂದ್ರ ಸೆಹ್ವಾಗ್ ಹೆಸರಿನಲ್ಲೂ ಅರ್ಜಿಗಳು ಬಂದಿವೆ. ಈ ರೀತಿ ನಕಲಿ ಅರ್ಜಿಗಳು ಬಂದಿರುವುದು ಇದೇ ಮೊದಲಲ್ಲ. ಕಳೆದ ಬಾರಿಯೂ ಇದೇ ರೀತಿ ನಕಲಿ ಅರ್ಜಿಗಳು ಬಂದಿದ್ದವು ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಕೋಚ್ ಸ್ಥಾನಕ್ಕೆ ವಿದೇಶೀಯರನ್ನು ನೇಮಕ ಮಾಡಲಾಗುತ್ತದೆ ಎಂಬ ವದಂತಿ ಹರಡಿತ್ತು. ಆದರೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ಬಿಸಿಸಿಐ ರಾಜಕೀಯದಿಂದ ಬೇಸತ್ತು ಅರ್ಜಿ ಸಲ್ಲಿಸಲು ಹಿಂದೇಟು ಹಾಕಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಮಾಜಿ ಶಾಸಕ ಗೌತಮ್ ಗಂಭೀರ್ ಆಯ್ಕೆಗೆ ತೆರೆಮರೆಯ ಪ್ರಯತ್ನಗಳು ನಡೆದಿವೆ ಎಂದು ಹೇಳಲಾಗಿದೆ.