ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಪುನಾರಾಂಭಮಾಡುವ ಕುರಿತು ಹೈಕೋರ್ಟ್ ದ್ವಿ ಸದಸ್ಯ ಪೀಠವು ನೀಡಲಿರುವ ತೀರ್ಪಿಗೆ ರಾಜ್ಯ ಸರ್ಕಾರ ಬದ್ಧವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಪ್ರಶೋತ್ತರ ಅವಧಿಯಲ್ಲಿ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಹೈಕೋರ್ಟ್ ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಆದರೆ ಹೈಕೋರ್ಟ್ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳು ಇದಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಸದ್ಯದಲ್ಲೇ ಅಂತಿಮ ಆದೇಶ ಬರಲಿದೆ. ನ್ಯಾಯಾಲಯ ನೀಡುವ ತೀರ್ಪಿಗೆ ನಾವು ಬದ್ದರಾಗಿದ್ದೇವೆ ಎಂದರು.
ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಸಂಬಂಧ ಈ ಹಿಂದೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಪ್ರಾರಂಭದಲ್ಲಿ ವಿದ್ಯುತ್ ಚಾಲಿತ ಬೈಕ್‌ಗಳಿಗೆ ಅವಕಾಶ ನೀಡಿದ್ದೆವು. ನಂತರ ಪೆಟ್ರೋಲ್ ಚಾಲಿತ ಬೈಕ್‌ಗಳು ಸೇವೆ ಒದಗಿಸಲು ಪ್ರಾರಂಭಿಸಿದವು. ಇದನ್ನು ವಿರೋಧಿಸಿ ಆಟೋ ಹಾಗೂ ಖಾಸಗಿಯವರು ವಿರೋಧ ವ್ಯಕ್ತಪಡಿಸಿದರು.
ಜನರ ಹಿತದೃಷ್ಟಿಯಿಂದ ಇದನ್ನು ಸರ್ಕಾರ ನಿಷೇಧ ಮಾಡಿತ್ತು. ನಮ್ಮ ಸರ್ಕಾರದ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಆದರೆ ದ್ವಿಸದಸ್ಯ ಪೀಠ ತಡೆಯಾಜ್ಞೆ ನೀಡಿದೆ ಎಂದರು.
ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತಿದ್ದರಿಂದ ವೂಲಾ, ಊಬರ್‌ನವರು ತಮಗೆ ತೊಂದರೆಯಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದರು. ಎಲ್ಲರ ಹಿತದೃಷ್ಟಿಯಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿತ್ತು. ಇನ್ನು ಗೀಗ್ ಕೆಲಸಗಾರರು ಪ್ರಯಾಣಿಕರ ಸೇವೆ ಒದಗಿಸಲಿಲ್ಲ. ಸ್ವಿಗ್ಗಿ, ಜೊಮೊಟೊ ಮತ್ತಿತರರು ಆಹಾರ, ತಿಂಡಿ ತಿನಿಸುಗಳನ್ನು ಸರಬರಾಜು ಮಾಡುತ್ತಾರೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.


