ರಾಹುಲ್ ದ್ರಾವಿಡ್ ನಿರ್ಗಮನದ ನಂತರ ತೆರವಾಗಲಿರುವ ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನದ ಸ್ಪರ್ಧೆಯಿಂದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹಿಂದೆ ಸರಿದ ಸುಳಿವು ನೀಡಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ 3ನೇ ಬಾರಿ ಪ್ರಶಸ್ತಿ ಗೆದ್ದ ನಂತರ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗಲಿದ್ದಾರೆ ಎಂಬ ವದಂತಿ ಹರಡಿತ್ತು. ಬಿಸಿಸಿಐ ಕಾರ್ಯದರ್ಶಿ ಜೈ ಶಾ ಭೇಟಿ ನೀಡಿ ಮಾತುಕತೆ ನಡೆಸಿದ್ದು ಇದಕ್ಕೆ ಇಂಬು ನೀಡಿತ್ತು.
ಕೆಕೆಆರ್ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಬಾಲಿವುಡ್ ನಟ ಹಾಗೂ ಮಾಲೀಕ ಶಾರೂಖ್ ಖಾನ್ ಗೌತಮ್ ಗಂಭೀರ್ ಗೆ ಖಾಲಿ ಚೆಕ್ ನೀಡಿ 10 ವರ್ಷ ಕೋಚ್ ಆಗಿ ಮುಂದುವರಿಯಲು ಆಹ್ವಾನ ನೀಡಿದ್ದರು. ಮಂಗಳವಾರ ಸುಮಾರು 5 ಗಂಟೆಗಳ ಕಾಲ ಮುಂಬೈನ ಶಾರೂಖ್ ಖಾನ್ ಮನೆಯಲ್ಲಿ ಭೇಟಿ ಮಾಡಿದ್ದ ಗಂಭೀರ್ ಸುದೀರ್ಘ ಮಾತುಕತೆ ನಡೆಸಿದ್ದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಾನು ಮಾಧ್ಯಮಗಳ ಕಣ್ಣಿಗೆ ಗುರಿಯಾಗಿದ್ದೇನೆ. ಕೆಕೆಆರ್ ಪ್ರಶಸ್ತಿ ಗೆದ್ದ ನಂತರ ಈ ಕುತೂಹಲ ಹೆಚ್ಚಾಗಿದೆ. ಆದರೆ ಕೆಕೆಆರ್ 3 ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದರೂ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಾದರಿಯಲ್ಲಿ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿಲ್ಲ. ಆದ್ದರಿಂದ ಕೆಕೆಆರ್ ಇನ್ನೂ ಮೂರು ಬಾರಿಯಾದರೂ ಪ್ರಶಸ್ತಿ ಗೆಲ್ಲಬೇಕಿದೆ ಎಂದರು.
ಸದ್ಯ ನನ್ನ ಗುರಿ ಕೆಕೆಆರ್ ಇನ್ನಷ್ಟು ಯಶಸ್ವಿಯಾಗಿ ಮುನ್ನಡೆಸುವುದಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಹಾಗೂ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಮುಂದೆ ಸಾಕಷ್ಟು ಅವಕಾಶಗಳು ಇರುವುದರಿಂದ ಕೆಕೆಆರ್ ಅನ್ನು ಮತ್ತಷ್ಟು ಬಲಿಷ್ಠ ತಂಡವಾಗಿ ರೂಪಿಸುವತ್ತ ಗಮನ ಹರಿಸಲಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಭಾರತ ತಂಡದ ಕೋಚ್ ಸ್ಥಾನದ ರೇಸ್ ನಿಂದ ಹಿಂದೆ ಸರಿದಿದ್ದಾಗಿ ಗಂಭೀರ್ ಹೇಳಿದರು.
ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಕರೆಯಲಾಗಿದ್ದ ಅರ್ಜಿ ಆಹ್ವಾನದ ಗಡುವು ಮುಗಿದಿದೆ. ಅಲ್ಲದೇ ವಿದೇಶೀ ಕೋಚ್ ನೇಮಕ ಕುರಿತು ಬಿಸಿಸಿಐ ನಿರಾಸಕ್ತಿ ಹೊಂದಿರುವುದಾಗಿ ಈಗಾಗಲೇ ಹೇಳಿಕೆ ನೀಡಿದ್ದು, ಇದೀಗ ಹೊಸ ಕೋಚ್ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.