ದಕ್ಷಿಣ ಭಾರತದ ಖ್ಯಾತ ರಾಮೇಶ್ವರಂ ಕೆಫೆಯ ಹೈದರಾಬಾದ್ ಶಾಖೆ ಮೇಲೆ ತೆಲಂಗಾಣ ಆಹಾರ ಸುರಕ್ಷತೆ ಅಧಿಕಾರಿಗಳು ದಾಳಿ ನಡೆಸಿ ಅವಧಿ ಮೀರಿದ ಬೇಳೆ ಹಾಗೂ ಹಾಲು ಉತ್ಪನ್ನಗಳನ್ನು ಬಳಸುತ್ತಿರುವುದನ್ನು ಪತ್ತೆ ಹಚ್ಚಿತ್ತು.
ಮೇ 23ರಂದು ನಡೆದ ದಾಳಿಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳುತ್ತಿರುವುದು ಪತ್ತೆಯಾಗಿತ್ತು. ದಾಳಿ ನಡೆದ ನಂತರ ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ಒಂದು ನಿಮಿಷದ ವೀಡಿಯೊದಲ್ಲಿ ಹೋಟೆಲ್ ನಲ್ಲಿ ಆಗಿರುವ ತಪ್ಪಿಗಾಗಿ ಕ್ಷಮೆ ಕೇಳಿದ್ದಾರೆ.
ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ 1 ನಿಮಿಷದ ವೀಡಿಯೊದಲ್ಲಿ ಕ್ಷಮೆ ಕೇಳಿದ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅವರ ದೇಹಭಾಷೆ ಮತ್ತು ಕ್ಷಮೆ ಕೇಳಿದ ರೀತಿ ನೋಡಿದರೆ ಬೇರೆಯರನ್ನು ಅನುಸರಿಸಿದಂತೆ ಇದೆಯೇ ಹೊರತು ಕ್ಷಮೆ ಕೇಳಿದ ರೀತಿ ಇಲ್ಲ ಎಂದು ಕಿಡಿಕಾರಿದ್ದಾರೆ.
ವೀಡಿಯೊದಲ್ಲಿ ರಾಘವೇಂದ್ರ ರಾವ್, ನಮ್ಮ ರೆಸ್ಟೋರೆಂಟ್ ನಲ್ಲಿ ಬಳಸುವ ಪದಾರ್ಥಗಳನ್ನು ಅತ್ಯುತ್ತಮ ಗುಣಮಟ್ಟದ್ದಾಗಿದೆ. ನಾವು ಬಳಸುವ ತರಕಾರಿ ಹಾಗೂ ಸಾಂಬಾರು ಪದಾರ್ಥಗಳು ಉತ್ತಮ ಗುಣಮಟ್ಟದ್ದಾಗಿದೆ. ಕೆಲವು ವಿಷಯದಲ್ಲಿ ತಪ್ಪಾಗಿದೆ. ಇದನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಅವರು ಹೇಳಿದ್ದಾರೆ.
ರಾಘವೇಂದ್ರ ರಾವ್ ಬಾಡಿ ಲಾಂಗ್ವೆಜ್ ಆಕ್ರಮಣಕಾರಿಯಾಗಿದೆ. ಅವಧಿ ಮೀರಿದ ಆಹಾರ ಪದಾರ್ಥ ಬಳಸಿದ್ದೇವೆ. ಈ ಬಗ್ಗೆ ನೋಡಿಕೊಳ್ಳುತ್ತೇವೆ. ನೀವು ಬಂದು ತಿನ್ನಿ ಎನ್ನುವಂತೆ ಇದೆ ಅವರ ಮಾತನಾಡಿದ ರೀತಿ ಎಂದು ಮತ್ತೊಬ್ಬ ಕಮೆಂಟ್ ಮಾಡಿದ್ದಾನೆ.