ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭಾನುವಾರ ವಿಕೋಪಕ್ಕೆ ತಿರುಗಿದ್ದು, ಎರಡೂ ದೇಶಗಳು ಪರಸ್ಪರ ದಾಳಿ ಪ್ರತಿದಾಳಿ ನಡೆಸಿವೆ. ಇದರಿಂದ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಮಧ್ಯದಲ್ಲಿರುವ ಕ್ಯಾಬಿನೆಟ್ ಕಚೇರಿಗಳನ್ನು ಹೊಂದಿರುವ ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿವೆ. ದಾಳಿಯಿಂದ ಬೆಂಕಿ ಹೊತ್ತಿಕೊಂಡಿದ್ದು, ಒಂದು ವರ್ಷದ ಮಗು ಸೇರಿದಂತೆ ಕನಿಷ್ಠ ಮೂರು ಜನರು ಮೃತಪಟ್ಟಿದ್ದಾರೆ.
ಪ್ರತೀಕಾರವಾಗಿ ದಾಳಿ ನಡೆಸಿದ ಉಕ್ರೇನ್ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ರಷ್ಯಾದ ಡ್ರುಜ್ಬಾ ತೈಲ ಪೈಪ್‌ಲೈನ್ ಹೊಡೆದುರುಳಿಸಿತು, ಇದು ಸರ್ಕಾರಿ ಮತ್ತು ಇಂಧನ ಮೂಲಸೌಕರ್ಯ ಧ್ವಂಸಗೊಳಿಸಿ ಅಪಾರ ಹಾನಿಯುಂಟು ಮಾಡಿದೆ.
ರಾತ್ರಿಯ ದಾಳಿಯ ನಂತರ ಕೈವ್‌ನ ಪೆಚೆರ್ಸ್ಕಿ ಜಿಲ್ಲೆಯ ಕ್ಯಾಬಿನೆಟ್ ಕಟ್ಟಡದ ಛಾವಣಿ ಮತ್ತು ಮೇಲಿನ ಮಹಡಿಗಳಿಂದ ದಟ್ಟವಾದ ಕಪ್ಪು ಹೊಗೆ ಹೊರಹೊಮ್ಮಿತು, ಇದನ್ನು ಅಧಿಕಾರಿಗಳು ತಿಂಗಳುಗಳಲ್ಲಿ ಅತ್ಯಂತ ಗಂಭೀರ ಉಲ್ಬಣ ಎಂದು ಬಣ್ಣಿಸಿದ್ದಾರೆ.


