ಲೈಂಗಿಕ ದೌರ್ಜನ್ಯ ಎಸಗಿದ ಪೆನ್ ಡ್ರೈವ್ ಪ್ರಕರಣದಲ್ಲಿ ಕಳೆದ ಒಂದು ತಿಂಗಳಿನಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಎಸ್ ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪಡೆದು ವಿದೇಶಕ್ಕೆ ತೆರಳಿದ್ದರಿಂದ ಲೋಕಸಭಾ ಸ್ಫೀಕರ್ ಗೆ ಮಾಹಿತಿ ನೀಡಲಿರುವ ಎಸ್ ಐಟಿ ಪೊಲೀಸರು, ವಶಕ್ಕೆ ಪಡೆದ ಪ್ರಜ್ವಲ್ ರೇವಣ್ಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಜರ್ಮನಿಯ ಮ್ಯೂನಿಚ್ ನಿಂದ ಗುರುವಾರ ಬೆಳಿಗ್ಗೆ ಹೊರಟ ಪ್ರಜ್ವಲ್ ರೇವಣ್ಣ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಡರಾತ್ರಿ 12.40ಕ್ಕೆ ಆಗಮಿಸಿದರು. ಪ್ರಜ್ವಲ್ ರೇವಣ್ಣ ವಿಮಾನದಿಂದ ಇಳಿಯುತ್ತಿದ್ದಂತೆ ವಿಮಾನ ನಿಲ್ದಾಣದ ಅಧಿಕಾರಿಗಳ ಸಹಾಯದಿಂದ ಪ್ರಜ್ವಲ್ ರೇವಣ್ಣ ಅವರನ್ನು ಎಸ್ ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಜ್ವಲ್ ರೇವಣ್ಣ ಆಗಮನದ ಹಿನ್ನೆಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಪೊಲೀಸ್ ಭದ್ರತೆಯನ್ನು ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿತ್ತು. ಎಸ್ ಐಟಿ ಪೊಲೀಸರು ಪ್ರಜ್ವಲ್ ವಿರುದ್ಧ ಹೊರಡಿಸಲಾಗಿರುವ ಲುಕ್ ಔಟ್ ನೋಟಿಸ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಗಳ ಮಾಹಿತಿಯನ್ನು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ನೀಡಿ ಬಂಧನಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದರು.
ಮ್ಯೂನಿಚ್ ನಿಂದ ಲುಫ್ತಾನ್ಸಾ ವಿಮಾನ ಮೂಲಕ ಆಗಮಿಸಿದ ಪ್ರಜ್ವಲ್ ಜಿ8 ಸೀಟ್ ನಂಬರ್ ನಲ್ಲಿ ಪ್ರಯಾಣಿಸಿದ್ದು, 8 ಟ್ರ್ಯಾಲಿ ಬ್ಯಾಗ್ ನೊಂದಿಗೆ ಬೆಂಗಳೂರಿಗೆ ಮರಳಿದ್ದಾರೆ.
ಏಪ್ರಿಲ್ 26ರಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ವೀಡಿಯೋ ಬಿಡುಗಡೆ ಮಾಡಿ ಕ್ಷಮಾಪಣೆ ಕೇಳಿದ್ದೂ ಅಲ್ಲದೇ ಬೆಂಗಳೂರಿಗೆ ಮೇ 31ರಂದು ಮರಳುತ್ತಿರುವುದಾಗಿ ತಿಳಿಸಿದ್ದರು.