ಬೆಂಗಳೂರು: ಚಲಿಸುತ್ತಿದ್ದ ರೈಲಿನ ಕೆಳಗೆ ಆಟೋ ಚಾಲಕನನ್ನು ತಳ್ಳಿ ಭೀಕರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಜಯಪುರ ಮೂಲದ ಆಟೋ ಚಾಲಕ ಇಸ್ಮಾಯಿಲ್ ಪಟವೇಗಾರ್ (20) ಕೊಲೆಯಾದ ಯುವಕ. ಪುನೀತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಯಾದ ಪ್ರತಾಪ್ ಪರಾರಿಯಾಗಿದ್ದಾನೆ.
ಇಸ್ಮಾಯಿಲ್ ಪಟವೇಗಾರ್ ನನ್ನು ರೈಲಿಗೆ ತಳ್ಳಿ ಕೊಲೆಗೈದ ಆರೋಪಿಗಳು ಮೃತದೇಹವನ್ನು ಹಳಿ ಮೇಲೆ ಇರಿಸಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು ಎಂದು ರೈಲ್ವೆ ಎಸ್ ಪಿ ಯತೀಶ್ ತಿಳಿಸಿದ್ದಾರೆ.
ಇಸ್ಮಾಯಿಲ್ ಹಾಗೂ ಪುನೀತ್ ಇಬ್ಬರೂ ಪರಸ್ಪರ ಸ್ನೇಹಿತರಾಗಿದ್ದು, ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡು ಒಟ್ಟಿಗೆ ದೊಡ್ಡ ನಿಕ್ಕುಂದಿ ಗ್ರಾಮದ ಪಿಜಿಯಲ್ಲಿ ವಾಸವಿದ್ದರು. ಆದರೆ ಪುನೀತ್ ಪ್ರೀತಿಸುತ್ತಿದ್ದ ಯುವತಿಯ ಮೊಬೈಲ್ ನಂಬರ್ ಪಡೆದು ಇಸ್ಮಾಯಿಲ್ ಹೆಚ್ಚು ಫೋನ್‌ನಲ್ಲಿ ಮಾತನಾಡಲಾರಂಭಿಸಿದ್ದ. ಇಸ್ಮಾಯಿಲ್‌ನ ಈ ನಡೆ ಪುನೀತ್‌ನ ಮತ್ತೋರ್ವ ಸ್ನೇಹಿತ ಪ್ರತಾಪ್‌ನ ಸಿಟ್ಟಿಗೆ ಕಾರಣವಾಗಿತ್ತು.
ಅದೇ ವಿಚಾರವಾಗಿ ಇಸ್ಮಾಯಿಲ್‌ನೊಂದಿಗೆ ಪುನೀತ್ ಹಾಗೂ ಪ್ರತಾಪ್‌ಗೆ ಜಗಳವಾಗಿತ್ತು. ಸೆಪ್ಟಂಬರ್ 7ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೊಡ್ಡನೆಕ್ಕುಂದಿ ಬಳಿ ಪುನೀತ್ ಹಾಗೂ ಪ್ರತಾಪ್ ಮದ್ಯಪಾನ ಮಾಡುತ್ತಾ ಕುಳಿತಿದ್ದರು.
ಅದೇ ವೇಳೆ ಅಲ್ಲಿಗೆ ಇಸ್ಮಾಯಿಲ್ ಬಂದಾಗ ಮತ್ತೆ ಗಲಾಟೆ ನಡೆದಿತ್ತು. ಈ ವೇಳೆ ಪ್ರತಾಪ್ ಹಾಗೂ ಪುನೀತ್, ಇಸ್ಮಾಯಿಲ್‌ನನ್ನು ಚಲಿಸುತ್ತಿದ್ದ ರೈಲಿನತ್ತ ತಳ್ಳಿದ್ದರು. ನಂತರ ಮೃತದೇಹವನ್ನು ಪುನಃ ರೈಲ್ವೆ ಹಳಿ ಮೇಲಿರಿಸಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾರಾದರೂ ಕೇಳಿದರೆ ರೀಲ್ಸ್ ಮಾಡಲು ಹೋಗಿ ರೈಲು ಡಿಕ್ಕಿಯಾಗಿ ಇಸ್ಮಾಯಿಲ್ ಸಾವನ್ನಪ್ಪಿದ್ದಾನೆ ಎಂದು ಹೇಳಲು ಪುನೀತ್ ಹಾಗೂ ಪ್ರತಾಪ್ ಕಥೆ ಸಿದ್ಧಪಡಿಸಿಕೊಂಡಿದ್ದರು. ಆದರೆ ಅಷ್ಟರಲ್ಲಾಗಲೇ ಆರೋಪಿ ಪುನೀತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಪ್ರತಾಪ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಪಿಜಿಯಲ್ಲಿ ಗಲಾಟೆ:
ದೊಡ್ಡನೆಕ್ಕುಂದಿಯ ರೈಲ್ವೆ ಹಳಿ ಬಳಿ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತ ವ್ಯಕ್ತಿ ವಿಜಯಪುರ ಮೂಲಕ ಇಸ್ಮಾಯಿಲ್ ಪಟವೇಗಾರ್ ಎಂಬುದು ಗೊತ್ತಾಗಿತ್ತು. ಬಳಿಕ ಸೆಪ್ಟಂಬರ್ 7 ರಂದು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಮತ್ತು ಇಸ್ಮಾಯಿಲ್ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದರು.
ಆರೋಪಿಯ ಪ್ರೇಯಸಿಯ ಮೊಬೈಲ್ ನಂಬರ್ ಪಡೆದು ಇಸ್ಮಾಯಿಲ್ ಮಾತನಾಡಿದ್ದ. ಇದರಿಂದ ಪಿಜಿಯಲ್ಲಿ ಗಲಾಟೆ ಶುರುವಾಗಿತ್ತು. ಬಳಿಕ ರೈಲ್ವೆ ಹಳಿ ಬಂದು ಜಗಳ ಮುಂದುವರಿಸಿದ್ದರು. ಈ ವೇಳೆ ಚಲಿಸುತ್ತಿದ್ದ ರೈಲಿಗೆ ತಳ್ಳಿದ್ದರು. ಇದರಿಂದ ಆತ ಮೃತಪಟ್ಟಿದ್ದ. ಬಳಿಕ ಶವವನ್ನು ರೈಲು ಹಳಿಯ ಮೇಲೆ ತಂದಿರಿಸಿ ಪರಾರಿಯಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ರೈಲ್ವೆ ಇಲಾಖೆಯ ಎಸ್ಪಿ ಯತೀಶ್. ಎನ್ ಮಾಹಿತಿ ನೀಡಿದರು.


