ನೇಪಾಳದಲ್ಲಿ ಪ್ರತಿಭಟನೆ ಸ್ವರೂಪ ತೀವ್ರಗೊಂಡ ಹಿನ್ನೆಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಸೇನೆಯನ್ನು ನಿಯೋಜಿಸಲಾಗಿದ್ದು, ನಾಳೆ (ಸೆ.11) ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ವಿಸ್ತರಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ನಿಷೇಧ ಹಿನ್ನೆಲೆಯಲ್ಲಿ ಜೆನ್-ಜೆಡ್ ಕರೆ ನೀಡಿರುವ ಪ್ರತಿಭಟನೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ದೇಶದ ಸಮಗ್ರ ರಾಜಕೀಯ ವ್ಯವಸ್ಥೆ ಬದಲಾವಣೆಗೆ ಆಗ್ರಹಿಸಲಾಗಿದೆ.
6000 ಕೈದಿಗಳು ಪರಾರಿ
ಪ್ರತಿಭಟನಾನಿರತರು ದರೋಡೆ, ಕಳ್ಳತನ, ಹಲ್ಲೆ ಸೇರಿದಂತೆ ಹಿಂಸಾಚಾರದಲ್ಲಿ ತೊಡಗಿದ್ದು, ರಾಜಧಾನಿ ಕಠ್ಮಂಡುವಿನಲ್ಲಿ ಸೇನೆ ನಿಯೋಜಿಸಲಾಗಿದೆ. ಇದರಿಂದ ಪರಿಸ್ಥಿತಿ ತಿಳಿಗೊಳ್ಳುವ ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಿಂದ ದೇಶದ 18 ಜೈಲುಗಳಲ್ಲಿದ್ದ 6000ಕ್ಕೂ ಅಧಿಕ ಕೈದಿಗಳು ಪರಾರಿಯಾಗಿದ್ದಾರೆ. ಇವರ ಶೋಧ ಕಾರ್ಯ ಪೊಲೀಸರು ಹಾಗೂ ಸೇನೆಗೆ ದೊಡ್ಡ ತಲೆನೋವಾಗಿದೆ.
ಬೀರ್ ಗಂಜ್ ಜೈಲಿಗೆ ನುಗ್ಗಿದ ಪ್ರತಿಭಟನಾಕಾರರು ಜೈಲಿನಲ್ಲಿದ್ದ ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ. ಕೈದಿಗಳು ಗಂಟುಮೂಟೆ ಕಟ್ಟಿಕೊಂಡು ಜೈಲಿನಿಂದ ಪರಾರಿಯಾಗುತ್ತಿರುವ ದೃಶ್ಯ ವೈರಲ್ ಆಗಿದೆ.
ನೇಪಾಳದಿಂದ ಪರಾರಿಯಾದ 5 ಮಂದಿ ಕೈದಿಗಳನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಇದರಿಂದ ದೇಶದ ನಾನಾ ಕಡೆ ನೇಪಾಳದ ಕೈದಿಗಳು ಭಾರತದೊಳಗೆ ಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಉತ್ತರ ಭಾರತದ ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
ಪಶುಪತಿ ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧ
ಪ್ರತಿಭಟನೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜಧಾನಿ ಕಠ್ಮಂಡುವಿನಲ್ಲಿರುವ ಪಶುಪತಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ನೇಪಾಳದಲ್ಲಿ ರಾಜಕೀಯ ಅಸ್ಥಿರತೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಭಾರತೀಯರು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ನೇಪಾಳಕ್ಕೆ ಭೇಟಿ ನೀಡಿದ ಭಾರತೀಯರು ಸೇರಿದಂತೆ ಹಲವು ದೇಶಗಳಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಸಿಲುಕಿದ್ದು, ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ.


