ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ಪಾವತಿಸಲು ಬೆಂಗಳೂರು ಸಂಚಾರಿ ಪೊಲೀಸರು ನೀಡಿದ್ದ ಅವಕಾಶ ಸೆಪ್ಟೆಂಬರ್ 12 ಶುಕ್ರವಾರ ಕೊನೆಯ ದಿನವಾಗಿದೆ.
ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ಪಾವತಿಸಲು ಸಂಚಾರಿ ಪೊಲೀಸರು ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಅವಕಾಶ ನೀಡಿದ್ದು, ಗಡುವು ವಿಸ್ತರಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ದಂಡ ಪಾವತಿಗೆ ನೀಡಲಾಗಿದ್ದ ರಿಯಾಯಿತಿಯನ್ನು ಕಳೆದ ಮೂರು ವಾರಗಳಲ್ಲಿ ವಾಹನ ಸವಾರರು ಬಳಸಿಕೊಂಡಿದ್ದು, ಇದುವರೆಗೆ 68 ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹಿಸಲಾಗಿದೆ.
ಆಗಸ್ಟ್ 23ರಿಂದ ಇಲ್ಲಿಯವರೆಗೆ 68,59,44,800 ರೂ. ದಂಡದ ಮೊತ್ತ ಸಂಗ್ರಹವಾಗಿದ್ದು, 24 ಲಕ್ಷದ 47 ಸಾವಿರದ 734 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
ರಿಯಾಯಿತಿ ಸೌಲಭ್ಯ ಪಡೆಯಲು ಸೆ.12ರಂದು ಕೊನೆ ದಿನವಾಗಿದ್ದು, ತದನಂತರ ಈ ಯೋಜನೆ ವಿಸ್ತರಿಸುವುದಿಲ್ಲ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ತಿಳಿಸಿದೆ.
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ, ಶೇ.50ರಷ್ಟು ದಂಡ ಪಾವತಿ ಸೌಲಭ್ಯ ಸೀಮಿತ ಅವಧಿವರೆಗೆ ಮಾತ್ರ ಇರಲಿದೆ. ಇನ್ನೂ ಕೆಲವೇ ದಿನಗಳಲ್ಲಿ ಅವಧಿ ಮುಗಿಯಲಿದ್ದು, ಸವಾರರು ಕೂಡಲೇ ದಂಡ ಪಾವತಿಸಬೇಕು. ಯಾವುದೇ ಕಾರಣಕ್ಕೂ ಯೋಜನೆಯನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


