ಅಮೆರಿಕದಿಂದ ಜಾರ್ಜಿಯಾಗೆ ಪ್ರವೇಶಿಸಿದ 56 ಭಾರತೀಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗಿದೆ ಎಂದು ಭಾರತದ ಪ್ರವಾಸಿ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಧ್ರುವಿ ಪಟೇಲ್ ಎಂಬ ಪ್ರವಾಸಿ ಮಹಿಳೆ ಇನ್ ಗ್ರಾಂನಲ್ಲಿ ಭಯಾನಕ ಘಟನೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದು, ಪ್ರವಾಸಕ್ಕೆ ತೆರಳಿದ್ದ 56 ಭಾರತೀಯರ ಗುಂಪು ವೀಸಾ ಸೇರಿದಂತೆ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದರೂ ವಶಕ್ಕೆ ಪಡೆದು ಸರಿಯಾದ ಆಹಾರ ಮತ್ತಿತರ ಸೌಲಭ್ಯ ನೀಡದೇ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕದಿಂದ ಜಾರ್ಜಿಯಾಗೆ ಪ್ರವೇಶಿಸುವಾಗ ಸಾದಾಖೋಲ್ ಗಡಿಯಲ್ಲಿ ಈ ಘಟನೆ ನಡೆದಿದ್ದು, ಭಾರತೀಯರನ್ನು ಜಾರ್ಜಿಯಾ ನಡೆಸಿಕೊಳ್ಳುವ ರೀತಿ ಅಸಹ್ಯ ಮತ್ತು ನಾಚಿಕೆಗೇಡಿನದ್ದಾಗಿದೆ ಎಂದು ಕಿಡಿಕಾರಿದ್ದಾರೆ.
ಸುಮಾರು 5 ಗಂಟೆಗಳ ಕಾಲ ನಡುಗುವ ಚಳಿಯಲ್ಲಿ ನಮ್ಮನ್ನು ನಿಲ್ಲಿಸಿದ್ದರು. ಆಹಾರವೂ ನೀಡದೇ ಟಾಯ್ಲೆಟ್ ಗೆ ಹೋಗಲು ಅವಕಾಶ ನೀಡಲಿಲ್ಲ. ನಮ್ಮನ್ನು ಸಂಪರ್ಕ ಸುಮಾರು 2 ಗಂಟೆಗಳ ಕಾಲ ವೀಸಾ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪ್ರಾಣಿಗಳಂತೆ ನಮ್ಮನ್ನು ರಸ್ತೆ ಬದಿಯಲ್ಲೇ ಕೂರಿಸಿದ್ದಾರೆ ಎಂದು ಪ್ರವಾಸಿ ಮಹಿಳೆ ಆರೋಪಿಸಿದ್ದಾರೆ.
ವೀಸಾ ಪರಿಶೀಲಿಸದೇ ನಮ್ಮ ದಾಖಲೆಗಳು ಸರಿಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಅಲ್ಲದೇ ನಮ್ಮನ್ನು ಪ್ರಾಣಿಗಳಂತೆ ಚಿತ್ರೀಕರಿಸುತ್ತಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅದನ್ನು ನಿಲ್ಲಿಸಲಾಯಿತು. ಅಧಿಕಾರಿಗಳ ವರ್ತನೆ ನಾಚಿಕೆಗೇಡು ಮತ್ತು ಅಸಹ್ಯಕರವಾಗಿತ್ತು ಎಂದು ಆರೋಪದಲ್ಲಿ ವಿವರಿಸಲಾಗಿದೆ.
ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಗೆ ಈ ವೀಡಿಯೋ ಲಗತ್ತಿಸಿರುವ ಧ್ರುವಿ ಪಟೇಲ್, ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


