ಭಾರತ ವಿರುದ್ಧದ ಹಸ್ತಲಾಘವ ವಿವಾದದಿಂದ ಅಸಮಾಧಾನಗೊಂಡ ಪಾಕಿಸ್ತಾನ ತಂಡ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಯುಎಇ ವಿರುದ್ಧದ ಪಂದ್ಯ ಬಹಿಷ್ಕರಿಸುವ ಬೆದರಿಕೆ ಹಾಕಿ ಬೇಡಿಕೆ ಈಡೇರದ ಕಾರಣ ಮೈದಾನಕ್ಕೆ ಇಳಿಯುವ ಮೂಲಕ ಹೈಡ್ರಾಮ ಸೃಷ್ಟಿಸಿದ ಘಟನೆ ಬುಧವಾರ ನಡೆದಿದೆ.
ಯುನೈಟೆಡ್ ಅರಬ್ ಎಮಿರೆಟ್ಸ್ ವಿರುದ್ಧ ಬುಧವಾರ ದುಬೈನಲ್ಲಿ ನಡೆದ ಪಂದ್ಯಕ್ಕೂ ಮುನ್ನ ಭಾರತ ವಿರುದ್ಧದ ಪಂದ್ಯದಲ್ಲಿ ಹಸ್ತಲಾಘವ ವಿವಾದದ ಕುರಿತು ಯಾವುದೇ ಕ್ರಮ ಕೈಗೊಳ್ಳದ ಮ್ಯಾಚ್ ರೆಫರಿ ಆಂಡಿ ಪೇಕ್ರಾಫ್ಟ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕಣಕ್ಕಿಳಿಯುವುದಿಲ್ಲ ಎಂದು ಪಟ್ಟು ಹಿಡಿದಿತ್ತು.
ಪಾಕಿಸ್ತಾನದ ಈ ನಿರ್ಧಾರದಿಂದ ಯುಎಇ ವಿರುದ್ದದ ಪಂದ್ಯ ನಡೆಯುವುದೇ ಅನುಮಾನವಾಗಿತ್ತು. ಆದರೆ ಪಾಕಿಸ್ತಾನದ ಬೇಡಿಕೆಗೆ ಐಸಿಸಿ ಮಣಿಯದ ಕಾರಣ ಕೊನೆಯ ಗಳಿಗೆಯಲ್ಲಿ ನಿರ್ಧಾರ ಬದಲಿಸಿದ ಪಾಕಿಸ್ತಾನ ತಂಡ ಅಖಾಡಕ್ಕೆ ಇಳಿಯಲು ನಿರ್ಧರಿಸಿತು. ಇದರಿಂದ ಸುಮಾರು ಒಂದು ಗಂಟೆ ತಡವಾಗಿ ಪಂದ್ಯ ಆರಂಭವಾಯಿತು.
ಮ್ಯಾಚ್ ರೆಫರಿ ಆಂಡಿ ಪೇಕ್ರಾಫ್ಟ್ ನೇತೃತ್ವದಲ್ಲಿಯೇ ಟಾಸ್ ನಡೆದಿದ್ದು, ಟಾಸ್ ಗೆದ್ದ ಯುಎಇ ತಂಡದ ನಾಯಕ ಮೊಹಮದ್ ವಾಸೀಂ ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡರು. ಸ್ಥಳೀಯ ಕಾಲಮಾನ ಪ್ರಕಾರ ಪಂದ್ಯ 6.30ಕ್ಕೆ ಆರಂಭವಾಗಬೇಕಿತ್ತು. ಆದರೆ ಪಾಕಿಸ್ತಾನದ ಹೈಡ್ರಾಮಾದಿಂದಾಗಿ ಪಂದ್ಯ 7.30ಕ್ಕೆ ಆರಂಭಗೊಂಡಿತು.
ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದ್ದು, ಗೆದ್ದವರು ಗುಂಪಿನಲ್ಲಿರುವ ಮತ್ತೊಂದು ತಂಡವಾದ ಭಾರತದ ಜೊತೆ ಸೂಪರ್-4 ಲೀಗ್ ಪ್ರವೇಶಿಸಲಿದೆ. ಒಂದು ವೇಳೆ ಈ ಪಂದ್ಯ ರದ್ದಾಗಿದ್ದರೆ ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆ ಉಂಟಾಗುವ ಸಾಧ್ಯತೆ ಇತ್ತು.
2 ಬೇಡಿಕೆ ಇಟ್ಟಿದ್ದ ಪಾಕಿಸ್ತಾನ
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಪಾಕಿಸ್ತಾನ ಕೂಡಲೇ ಪಂದ್ಯದ ರೆಫರಿ ಆಂಡಿ ಪೇಕ್ರಾಫ್ಟ್ ಅವರನ್ನು ವಜಾಗೊಳಿಸಬೇಕು. ಮತ್ತೊಂದು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸುದ್ದಿಗೋಷ್ಠಿಯಲ್ಲಿ ರಾಜಕೀಯ ಪ್ರೇರಿತ ಹೇಳಿಕೆ ನೀಡಿರುವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು.
ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಹೊರತುಪಡಿಸಿದ ರಾಜಕೀಯ ಪ್ರೇರಿತ ಹೇಳಿಕೆ ನೀಡುವ ಮೂಲಕ ಕ್ರೀಡಾ ಸ್ಫೂರ್ತಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿತು.
ಪಾಕಿಸ್ತಾನ ತಂಡದ ಆಟಗಾರರು ಮೈದಾನದಲ್ಲೇ ಇದ್ದು ಅಂತಿಮ ಸೂಚನೆ ಬರುವವರೆಗೂ ಕಾಯುತ್ತಿದ್ದರು. ಈ ವೇಳೆ ಪಿಸಿಬಿ ಅಧಿಕಾರಿಗಳು ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಐಸಿಸಿ ಯಾವುದೇ ಬೇಡಿಕೆಗೆ ಮಣಿಯದ ಕಾರಣ ಪಾಕಿಸ್ತಾನ ಆಟಗಾರರು ತಮ್ಮ ಹಠವನ್ನು ಬಿಟ್ಟು ಆಡಲು ನಿರ್ಧರಿಸಿದರು. ಈ ಮೂಲಕ ಪಾಕಿಸ್ತಾನ ಆಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಮುಖಭಂಗಕ್ಕೆ ಒಳಗಾಯಿತು.


