ಮದುವೆ ಆಗಲು ವಿದೇಶದಿಂದ ಬಂದ 71 ವರ್ಷದ ವೃದ್ದೆಯನ್ನು 50 ಲಕ್ಷ ರೂ. ಸುಪಾರಿ ಕೊಟ್ಟು ಇಂಗ್ಲೆಂಡ್ ನಲ್ಲಿ ನೆಲೆಸಿರುವ 75 ವರ್ಷದ ಭಾರತೀಯ ಮೂಲದ ವೃದ್ಧ ಕೊಲೆ ಮಾಡಿಸಿದ್ದಾನೆ.
ಇಳಿವಯಸ್ಸಿನಲ್ಲಿ ಮದುವೆ ಆಗುವ ಆಸೆಯಿಂದ ಭಾರತಕ್ಕೆ ಬಂದ ಅಮೆರಿಕದ ಸೀಟ್ಲ್ ನಲ್ಲಿ ವಾಸವಿದ್ದ ರುಪಿಂದರ್ ಕೌರ್ ಪಂದೇರ್ (71) ಕೊಲೆಯಾದರೆ, 75 ವರ್ಷದ ಚರಣ್ ಜೀತ್ ಗ್ರೇವಾಲ್ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾನೆ.
ಮದುವೆ ಆಗಲು ಬಂದ ರುಪಿಂದರ್ ನನ್ನು ಕೊಲೆ ಮಾಡಲು ಪಂಜಾಬ್ ಮೂಲದ ವ್ಯಕ್ತಿಗೆ 50 ಲಕ್ಷ ರೂ. ಹಾಗೂ ವಿದೇಶದಲ್ಲಿ ನೆಲೆ ಕಂಡುಕೊಳ್ಳಲು ವ್ಯವಸ್ಥೆ ಮಾಡುವ ಭರವಸೆ ನೀಡಿ ಕೊಲೆ ಮಾಡಿಸಿರುವುದು ಪೊಲೀಸರ ತನಿಖೆ ವೇಳೆ ಬಯಲಿಗೆ ಬಂದಿದೆ.
ಪರಿಸ್ಪರ ಪರಿಚಯವಾದ ನಂತರ ರುಪಿಂದರ್ ಆಸ್ತಿ ವಿವಾದದಲ್ಲಿ ಸಿಲುಕಿದ್ದನ್ನು ತಿಳಿದ ಚರಣ್ ಜೀತ್ ನೆರವು ನೀಡುವುದಾಗಿ ಭರವಸೆ ನೀಡಿದ. ಈ ರೀತಿ ಪರಸ್ಪರ ಪರಿಚಯ ಸ್ನೇಹಕ್ಕೆ ತಿರುಗಿತು. ಇದೇ ನೆಪದಲ್ಲಿ ಚರಣ್ ಜೀತ್ ಹಲವಾರು ಬಾರಿ ಆಕೆಯಿಂದ ದೊಡ್ಡ ಮೊತ್ತವನ್ನು ಪಡೆದಿದ್ದ.
ಸ್ಥಳೀಯ ಕೋರ್ಟ್ ನಲ್ಲಿ ಟೈಪಿಸ್ಟ್ ಆಗಿದ್ದ ಸುಖಜೀತ್ ಸಿಂಗ್ ಎಂಬಾತನನ್ನು ಪರಿಚಯ ಮಾಡಿ ಈತನೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಿದ್ದ ಚರಣ್ ಜೀತ್ ಲೂಧಿಯಾನದಲ್ಲಿರುವ ಕಿಲಾ ರಾಯ್ ಪುರಕ್ಕೆ ಬರುವಂತೆ ಆಹ್ವಾನಿಸಿದ್ದ.
ಇದೇ ವೇಳೆ ಇಬ್ಬರೂ ಪಂಜಾಬ್ ಮೂಲದವರು ಎಂದು ತಿಳಿದ ನಂತರ ರುಪಿಂದರ್ ಈಗಾಗಲೇ ಎರಡು ಬಾರಿ ಮದುವೆ ಆಗಿದ್ದ ಚರಣ್ ಜೀತ್ ಗೆ ಮದುವೆ ಪ್ರಸ್ತಾಪ ಮಾಡಿದ್ದರು. ಈ ವೇಳೆ ತವರೂರಾದ ಲೂಧಿಯಾನಕ್ಕೆ ಬಂದರೆ ಆಸ್ತಿ ವಿವಾದ ಬಗೆಹರಿಸುವ ಜೊತೆಗೆ ಮದುವೆ ಆಗುವ ಭರವಸೆಯನ್ನು ನೀಡಿದ್ದ.
ರುಪಿಂದರ್ ಮದುವೆ ಆಗುವ ಯಾವುದೇ ಉದ್ದೇಶದ ಹೊಂದಿಲ್ಲದ ಚರಣ್ ಜೀತ್ ಆಕೆಯ ಬಳಿ ಇದ್ದ ಹಣದ ಮೇಲೆ ಕಣ್ಣು ಹಾಕಿದ್ದು, ಇದಕ್ಕಾಗಿ ಸುಖಜೀತ್ ಸಿಂಗ್ ಸಹಾಯ ಪಡೆದು ಆತನಿಗೆ 50 ಲಕ್ಷ ರೂ. ಹಾಗೂ ವಿದೇಶದಲ್ಲಿ ನೆಲೆ ಕಂಡುಕೊಳ್ಳಲು ನೆರವು ನೀಡುವ ಭರವಸೆ ನೀಡಿ ಕೊಲೆ ಮಾಡಿಸಿದ್ದ.
ಲೂಧಿಯಾನದಲ್ಲಿ ತನ್ನೊಂದಿಗೆ ಇದ್ದ ರುಪಿಂದರ್ ನನ್ನು ಜುಲೈ 18ರಂದು ಸುಖಜೀತ್ ಸಿಂಗ್ ಬೇಸ್ ಬಾಲ್ ಬ್ಯಾಟ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ನಂತರ ಆಕೆಯ ಶವ ಸುಟ್ಟು ಹಾಕಿ ಫೋನ್ ಹಾಳು ಮಾಡಿದ್ದ.
ರುಪಿಂದರ್ ಸೋದರಿ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಮೆರಿಕದ ರಾಯಭಾರ ಕಚೇರಿ ಸಂಪರ್ಕಿಸಿ ದೂರು ನೀಡಿದ್ದಾರೆ. ಭಾರತಕ್ಕೆ ತೆರಳಿದ್ದ ರುಪಿಂದರ್ ಫೋನ್ ಲೊಕೇಷನ್ ಆಧರಿಸಿ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.


