ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್ ಎಲ್ ಭೈರಪ್ಪ ಅವರಿಗೆ ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದರು.
ಮೈಸೂರಿನಲ್ಲಿ ಪ್ರಸ್ತುತ ನೆಲೆಸಿದ್ದ ಭೈರಪ್ಪ ಅವರು ವಯೋಸಹಜ ಅನಾರೋಗ್ಯ ಹಾಗೂ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಕಳೆದ 3 ತಿಂಗಳಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು.
ಬಿತ್ತಿ, ವಂಶವೃಕ್ಷ, ಗೃಹಭಂಗ, ನಾಯಿ ನೆರಳು, ತಬ್ಬಲಿಯು ನಿನಾದೆ ಮಗನೇ, ದಾಟು ಸೇರಿದಂತೆ ಹಲವು ಕಾದಂಬರಿಗಳನ್ನು ರಚಿಸಿದ್ದರು. ಇವರ ಬಹುತೇಕ ಕಾದಂಬರಿಗಳು ಪ್ರಕಟವಾದ ದಿನವೇ ಸಂಪೂರ್ಣ ಮಾರಾಟವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಿದ್ದವು.
1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದರೆ, 1975ರಲ್ಲಿ ದಾಟು ಕಾದಂಬರಿಗಾಗಿ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. 2023ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ನೀಡ ಸನ್ಮಾನಿಸಲಾಗಿತ್ತು.
ನಡೆದು ಬಂದ ಹಾದಿ
1932ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೆಶಿವರ ಗ್ರಾಮದಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಕುಟುಂಬದಲ್ಲಿ ಎಸ್.ಎಲ್. ಭೈರಪ್ಪ ಜನಿಸಿದ್ದರು.
1958ರಲ್ಲಿ ಎಂಎ ಫಿಲಾಸಫಿಯಲ್ಲಿ ಪದವಿ ಪಡೆದಿದ್ದು, 1963ರಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ್ದರು.
ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ 1966ಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದಿವೆ. 1975ರಲ್ಲಿ ದಾಟು ಚಿತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
ಸತ್ಯ ಮತ್ತು ಸೌಂದರ್ಯ ವಿಷಯದ ಮೇಲೆ ಇವರು ಬರೆದ ಪ್ರಬಂಧಕ್ಕೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿವಿಯಿಂದ ಡಾಕ್ಟರೇಟ್ ಪದವಿ ಲಭಿಸಿದೆ. 1961ರಲ್ಲಿ ಬರೆದ ಮೊದಲ ಕಾದಂಬರಿ ಧರ್ಮಶ್ರೀ. ಅಲ್ಲಿಂದ ಇಲ್ಲಿಯವರೆಗೆ 4 ದಶಕಗಳಲ್ಲಿ 21 ಕಾದಂಬರಿಗಳನ್ನು ಬರೆದಿದ್ದಾರೆ. 1999ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.


