ವಿಶೇಷಚೇತನರ ಕೋಟಾದಡಿ ಮೆಡಿಕಲ್ ಸೀಟು ಪಡೆಯಲು ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುವ ಜಾಲವನ್ನು ಭೇಧಿಸಿರುವ ಬೆಂಗಳೂರು ಪೊಲೀಸರು ಸರ್ಕಾರಿ ವೈದ್ಯರು, ಶಿಕ್ಷಕ ಸೇರಿ ಐವರನ್ನು ಬಂಧಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮುಖ್ಯ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರಿನ ಮಲ್ಲೇಶ್ವರ ಠಾಣೆ ಪೊಲೀಸರು ಶಿಕ್ಷಕ ಭರಮಪ್ಪ, ವಿಜಯನಗರದ ಹೊಸಪೇಟೆಯ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ್, ಮಕ್ಕಳ ತಜ್ಞ ಡಾ.ಶ್ರೀನಿವಾಸ್, ಕೊಪ್ಪಳದ ಕುಕನೂರು ತಾಲೂಕಿನ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕ ಸುಧಾಕರ್, ಪ್ರಥಮ ದರ್ಜೆ ಸಹಾಯಕ ಉಮೇಶ್ ಚೌಧರಿ ಅವರನ್ನು ಬಂಧಿಸಿದ್ದಾರೆ.
ಪ್ರಸ್ತಕ ಶೈಕ್ಷಣಿಕ ಸಾಲಿನ ಯುಜಿ ಸಿಇಟಿ ಹಾಗೂ ಯುಜಿ ನೀಟ್ಗಳಲ್ಲಿ ಮೆಡಿಕಲ್ ಸೀಟು ಕೋರಿ 21 ಅಭ್ಯರ್ಥಿಗಳು ತಮಗೆ ಶ್ರವಣದೋಷವಿದೆ ಎಂದು ಹೇಳಿ ವಿಶೇಷಚೇತನರ ಕೋಟಾದಡಿ ಪ್ರಮಾಣಪತ್ರ ಸಲ್ಲಿಸಿದ್ದರು. ಪರಿಶೀಲನೆಯ ವೇಳೆ ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣಪತ್ರ ನಕಲಿ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೆಇಎ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.
ಪ್ರಮುಖ ಆರೋಪಿ ಭರಮಪ್ಪ, ಮೂಲತಃ ಚಿತ್ರದುರ್ಗದ. ಬೆಂಗಳೂರಿನ ನಂದಿನಿ ಲೇಔಟ್ನ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ. ಅಕ್ರಮವಾಗಿ ಹಣ ಸಂಪಾದಿಸಲು ವಿಶೇಷಚೇತನ ಕೋಟಾದಡಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಅಭ್ಯರ್ಥಿಗಳನ್ನು ನಂಬಿಸಿ ಅವರಿಂದ 5 ಲಕ್ಷ ರೂ ಹಣ ಪಡೆಯುತ್ತಿದ್ದ. ಬಳಿಕ ತನ್ನ ಸಂಪರ್ಕದಲ್ಲಿದ್ದ ಇತರೆ ಆರೋಪಿಗಳೊಂದಿಗೆ ಸೇರಿಕೊಂಡು ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸುತ್ತಿದ್ದ. ಈ ವರ್ಷ 21 ಮಂದಿ ಅಭ್ಯರ್ಥಿಗಳಿಂದ ಲಕ್ಷಾಂತರ ಹಣ ಪಡೆದು ನಕಲಿ ದಾಖಲಾತಿ ಸೃಷ್ಟಿಸಿದ್ದ ಎಂದು ಪೊಲೀಸರು ತಿಳಿಸಿದ್ಧಾರೆ.
ಸಿಎಂ ಕಚೇರಿಯಲ್ಲಿ ಕೆಲಸ ಮಾಡುವುದಾಗಿ ಸುಳ್ಳು ಹೇಳಿದ್ದ: ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರೂ ಅಭ್ಯರ್ಥಿಗಳನ್ನು ಸಂಪರ್ಕಿಸಿ, ತಾನು ವಿಧಾನಸೌಧದ ಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದ. ಅಲ್ಲದೇ, ವಿಶೇಷಚೇತನ ಕೋಟಾದಡಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಅವರಿಂದ ಅಗತ್ಯ ದಾಖಲಾತಿಗಳನ್ನು ಪಡೆದು ಇನ್ನಿತರ ಆರೋಪಿಗಳ ಜೊತೆಗೂಡಿ ಯುಡಿ ಐಡಿ ಕಾರ್ಡ್ (ನಕಲಿ ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ತಯಾರಿಸುತ್ತಿದ್ದ. ಆರೋಪಿಗಳು ಕೆಲ ವರ್ಷಗಳಿಂದ ವಂಚನೆ ಜಾಲದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಶಂಕೆ ಇದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ಧಾರೆ.


