ಮಾನಸಿಕ ಅಸ್ವಸ್ಥನೊಬ್ಬ ತಾಯಿಯ ಮುಂದೆಯೇ 5 ವರ್ಷದ ಮಗನ ತಲೆ ಕಡಿದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಆರೋಪಿ ಮಹೇಶ್ (25) ಬೈಕ್ ನಲ್ಲಿ ಬಂದಿದ್ದು, ಕುಲು ಪ್ರದೇಶದಲ್ಲಿರುವ ಮನೆಯೊಂದಕ್ಕೆ ಏಕಾಏಕಿ ನುಗ್ಗಿದ್ದಾನೆ. ಅಪರಿಚಿತ ವ್ಯಕ್ತಿ ಮನೆಗೆ ನುಗ್ಗಿದ್ದರಿಂದ ಮನೆಯವರು ಗೊಂದಲಕ್ಕೆ ಒಳಗಾಗಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಹರಿತವಾದ ಕತ್ತಿಯನ್ನು ತೆಗೆದುಕೊಂಡು 5 ವರ್ಷದ ಬಾಲಕನನ್ನು ಎಳೆದು ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲದೇ ರುಂಡ-ಮುಂಡ ಬೇರ್ಪಡಿಸಿ ವಿಕೃತಿ ಮೆರೆದಿದ್ದಾನೆ.
ಮಗನ ರಕ್ಷಣೆಗೆ ಹೋರಾಡಿದ ತಾಯಿ ಗಾಯಗೊಂಡಿದ್ದು, ಕಣ್ಣೆದುರೇ ನಡೆದ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಯಿಯ ಆಕ್ರಂದನ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದು, ಮಗುವನ್ನು ಕೊಂದ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆತ ದಾರಿ ಮಧ್ಯೆದಲ್ಲೇ ಮೃತಪಟ್ಟಿದ್ದಾನೆ.
ಪೊಲೀಸ್ ಆಯುಕ್ತರು ಇದೊಂದು ಆಘಾತಕಾರಿ ಘಟನೆಯಾಗಿದ್ದು, ಸ್ಥಳೀಯರ ಹಲ್ಲೆಯಿಂದ ಗಾಯಗೊಂಡಿದ್ದ ಆರೋಪಿ ಮೃತಪಟ್ಟಿದ್ದಾನೆ. ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಆರೋಪಿ ಮಹೇಶ್ ಅಲಿಗಢ್ ಪುರ ಜಿಲ್ಲೆಯ ಜೋಬಟ್ ಬಾಗಡಿ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥನಾಗಿದ್ದ ಆತ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ, ಮಗುವನ್ನು ಕೊಲೆ ಮಾಡುವ ಮುನ್ನ ಅಂಗಡಿಯಲ್ಲಿ ಆಹಾರವನ್ನು ಕದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


