ಸಾಮಾನ್ಯವಾಗಿ ಮೈಸೂರು ದಸರಾದಲ್ಲಿ ಸ್ಥಾನ ಪಡೆದ ಆನೆಗಳಿಗೆ ಹಲವು ವರ್ಷಗಳ ನಂತರ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗುತ್ತದೆ. ಆದರೆ ಇದೇ ಮೊದಲ ಬಾರಿ ಮೂರು ಆನೆಗಳಿಗೆ ಮೊದಲ ಪ್ರವೇಶದಲ್ಲೇ ಜಂಬೂಸವಾರಿಯಲ್ಲಿ ಭಾಗಿಯಾಗುವ ಅವಕಾಶ ಲಭಿಸಿದೆ.
ಇದೇ ಮೊದಲ ಬಾರಿಗೆ ದಸರಾಗೆ ಆಗಮಿಸಿರುವ ಹೆಣ್ಣಾನೆಗಳಾದ ರೂಪ, ಹೇಮಾವತಿ ಮತ್ತು ಗಂಡಾನೆ ಶ್ರೀಕಂಠನಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಸಾಮಾನ್ಯವಾಗಿ ದಸರಾಗೆ ಮೊದಲ ಬಾರಿಗೆ ಆಗಮಿಸಿದ ಹೊಸ ಆನೆಗಳನ್ನು ಜಂಬೂ ಸವಾರಿ ಮೆರವಣಿಗೆಗೆ ಬಳಕೆ ಮಾಡುವುದಿಲ್ಲ. ಈ ಆನೆಗಳೇ ಮುಂದಿನ ವರ್ಷದ ದಸರಾಗೆ ಆಗಮಿಸಿದರೆ ಆಗ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೆ ಈ ಬಾರಿ ಹೊಸ ಆನೆಗಳಾದ ರೂಪ, ಹೇಮಾವತಿ ಮತ್ತು ಶ್ರೀಕಂಠನಿಗೆ ಅದೃಷ್ಟ ಒಲಿದು ಬಂದಿದ್ದು, ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಬೆಚ್ಚಿದ ಶ್ರೀಕಂಠನಿಗೆ ಅವಕಾಶ: ಮೈಸೂರು ಅರಮನೆ ಆವರಣದಲ್ಲಿ ಖಾಸಗಿ ದರ್ಬಾರ್ ಪೂಜೆಗೆ ಹೋಗುವಾಗ ಶ್ರೀಕಂಠ ಆನೆ ಶಬ್ಧಕ್ಕೆ ಬೆದರಿತ್ತು. ಆದರೆ ಯಾವುದೇ ಅನಾಹುತ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಅದೃಷ್ಟವೆಂಬಂತೆ, ಮೊದಲ ಪ್ರಯತ್ನದಲ್ಲೇ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದೆ.
ಹೊಸ ಆನೆಗಳ ಪರಿಚಯ
ಹೇಮಾವತಿ: 11 ವರ್ಷ ವಯಸ್ಸಿನ ಹೇಮಾವತಿ ಆನೆ 2.25 ಮೀಟರ್ ಎತ್ತರ, 2.8 ಮೀಟರ್ ಉದ್ದ ಇದೆ. ಈ ಆನೆ 2014ರ ನವೆಂಬರ್ನಲ್ಲಿ ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಜನಿಸಿತ್ತು. ನಯಾಜ್ ಪಾಷ, ಜೆ.ಎನ್.ಅಬಿಲ್ ಅವರು ಹೇಮಾವತಿ ಆನೆಯ ಮಾವುತ ಮತ್ತು ಕಾವಾಡಿಗರಾಗಿದ್ದಾರೆ.
ರೂಪ: ಭೀಮನಕಟ್ಟೆ ಆನೆ ಶಿಬಿರದಿಂದ ಬಂದಿರುವ 44 ವರ್ಷದ ರೂಪ ಹೆಣ್ಣಾನೆಯನ್ನು 2016ರಲ್ಲಿ ಸರ್ಕಸ್ ಕಂಪನಿಯಿಂದ ರಕ್ಷಿಸಲಾಯಿತು. ಈ ಆನೆ 2.45 ಮೀಟರ್ ಎತ್ತರ, 2.90 ಮೀಟರ್ ಉದ್ದ ಇದೆ. ಮಾವುತ ಮಂಜುನಾಥ್, ಕಾವಾಡಿ ಮಂಜು ರೂಪ ಆನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಶ್ರೀಕಂಠ: ಮತ್ತಿಗೋಡು ಆನೆ ಶಿಬಿರದ 56 ವರ್ಷ ವಯಸ್ಸಿನ ಶ್ರೀಕಂಠ ಆನೆಯನ್ನು 2014ರಲ್ಲಿ ಹಾಸನ ವಿಭಾಗದ ಶನಿವಾರ ಸಂತೆ ವಲಯದ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. 2.86 ಮೀಟರ್ ಎತ್ತರ, 3.25 ಮೀಟರ್ ಉದ್ದ ಇರುವ ಈ ಆನೆಯನ್ನು ಮಾವುತ ಜೆ.ಆರ್.ರಾಧಕೃಷ್ಣ, ಕಾವಾಡಿ ಕೆ.ಓಂಕಾರ್ ನೋಡಿಕೊಳ್ಳುತ್ತಿದ್ದಾರೆ.


