ಭಾರತೀಯ ಸಿನಿಮಾಗಳ ಪ್ರದರ್ಶನ ವಿರೋಧಿಸಿ ದಾಳಿಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆನಡಾಡಲ್ಲಿ ಕನ್ನಡದ ಕಾಂತಾರ ಚಾಪ್ಟರ್-1 ಸೇರಿದಂತೆ ಹಲವು ಚಿತ್ರಗಳ ಪ್ರದರ್ಶನ ರದ್ದುಗೊಳಿಸಲಾಗಿದೆ.
ಕಳೆದೆರಡು ವಾರಗಳಿಂದ ಭಾರತೀಯ ಸಿನಿಮಾ ಪ್ರದರ್ಶನ ನಡೆಯುತ್ತಿರುವ ಥಿಯೇಟರ್ ಗಳ ಮೇಲೆ ಗುಂಡಿನ ದಾಳಿ, ಬೆಂಕಿ ಹಚ್ಚುವುದು ಸೇರಿದಂತೆ ಕಿಡಿಗೇಡಿಗಳಿಂದ ದಾಂಧಲೆ ನಡೆಯುತ್ತಿದೆ.

ಥಿಯೇಟರ್ ಗಳ ಮೇಲೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಚಾಪ್ಟರ್ -1, ಪವನ್ ಕಲ್ಯಾಣ್ ನಟಿಸಿರುವ ದೆ ಕಾಲ್ ಹಿಮ್ ಓಜಿ ಚಿತ್ರಗಳ ಪ್ರದರ್ಶನ ರದ್ದುಗೊಳಿಸಲಾಗಿದೆ.
ಸೆಪ್ಟೆಂಬರ್ 25ರಂದು ಮೊದಲ ಬಾರಿ ದಕ್ಷಿಣ ಏಷ್ಯಾ ಹಾಗೂ ಭಾರತೀಯ ಚಿತ್ರಗಳು ಪ್ರದರ್ಶನವಾಗುತ್ತಿದ್ದ ಥಿಯೇಟರ್ ಗಳ ಮೇಲೆ ದಾಳಿ ನಡೆದಿದೆ. ಅಂದು ಇಬ್ಬರು ದುಷ್ಕರ್ಮಿಗಳು ರಾಸಾಯನಿಕ ತುಂಬಿದ ಕ್ಯಾನ್ ಗಳನ್ನು ಥಿಯೇಟರ್ ಮೇಲೆ ಎಸೆದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ಎಸ್ ಯುವಿ ಕಾರಿನಲ್ಲಿ ಬಂದ ಇಬ್ಬರು ಥಿಯೇಟರ್ ದ್ವಾರದ ಬಳಿ ಬೆಂಕಿ ಹಾಕಿರುವ ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿತ್ತು.
ಅಕ್ಟೋಬರ್ 2ರಂದು ಕಾಂತಾರ ಚಾಪ್ಟರ್-1 ಬಿಡುಗಡೆ ಆಗಿದ್ದು, ಅಂದು ಬೆಳಿಗ್ಗೆ 1.30ರ ಸುಮಾರಿಗೆ ಥಿಯೇಟರ್ ಕಟ್ಟಡದೊಳಗೆ ಒಬ್ಬ ವ್ಯಕ್ತಿ ಹಲವು ಕಡೆ ಬೆಂಕಿ ಹಚ್ಚಿದ್ದಾನೆ. ದುಷ್ಕರ್ಮಿ ಕಪ್ಪು ಬಟ್ಟೆ, ಕಪ್ಪು ಮಾಸ್ಕ್ ಧರಿಸಿದ್ದ.
ಭಾರತೀಯ ಚಿತ್ರಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಹಿನ್ನೆಲೆಯಲ್ಲಿ ಚಿತ್ರಗಳ ಪ್ರದರ್ಶನ ರದ್ದುಗೊಳಿಸಲಾಗಿದ್ದು, ಪರಿಸ್ಥಿತಿ ಅವಲೋಕಿಸಿ ಚಿತ್ರಗಳ ಪ್ರದರ್ಶನ ಮಾಡುವುದಾಗಿ ಥಿಯೇಟರ್ ಮಾಲೀಕರು ಹೇಳಿಕೆ ನೀಡಿದ್ದಾರೆ.


