ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ತಂತ್ರಜ್ಞಾನ ಬಳಸಿ ಕಾಲೇಜಿನ ಸುಮಾರು 36 ವಿದ್ಯಾರ್ಥಿನಿಯರ ಅಶ್ಲೀಲ ಫೋಟೊ ರಚಿಸಿದ ಛತ್ತೀಸಗಢದ ಐಟಿ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.
ವಿದ್ಯಾರ್ಥಿಯ ಮೊಬೈಲ್ ಪರಿಶೀಲಿಸಿದಾಗ 1000ಕ್ಕೂ ಅಧಿಕ ಫೋಟೊ ಹಾಗೂ ವೀಡಿಯೊಗಳು ಪತ್ತೆಯಾಗಿವೆ.
ಛತ್ತೀಸಗಢದ ನಯಾ ರಾಯ್ ಪುರದ ಇಂಟರ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿದ್ಯಾರ್ಥಿ ಮೂರನೇ ವರ್ಷದ ಆಗಿರುವ ಬಾಲಿಸುಪರದ ಮೂಲದ ಯುವಕನನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.
ಸೋಮವಾರ ಸುಮಾರು 36 ವಿದ್ಯಾರ್ಥಿನಿಯರು ದೂರು ನೀಡಿದ ಹಿನ್ನೆಲೆಯಲ್ಲಿ ಕಾಲೇಜಿನ ಅಧಿಕಾರಿಗಳು ಯುವಕನನ್ನು ಕರೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಅಕ್ಟೋಬರ್ 6ರಂದು ಕೆಲವು ವಿದ್ಯಾರ್ಥಿನಿಯರು ದೂರು ನೀಡಿದ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ತನಿಖಾ ತಂಡವನ್ನು ರಚಿಸಿತ್ತು. ತನಿಖಾ ತಂಡ ವಿದ್ಯಾರ್ಥಿಯ ಕೊಠಡಿ ಪರಿಶೀಲಿಸಿ ಲ್ಯಾಪ್ ಟಾಪ್, ಮೊಬೈಲ್, ಪೆನ್ ಡ್ರೈವ್ ಮುಂತಾದವುಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿತು.
ಮೂವರು ಸದಸ್ಯರ ತಂಡ ದೂರು ನೀಡಿದ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ವಿಚಾರಣೆ ನಡೆಸಿದ್ದೂ ಅಲ್ಲದೇ ಯಾವುದೇ ಮಾಹಿತಿ ಹೊರಗೆ ಸೋರಿಕೆ ಆಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದರು. ಆರೋಪಿಯ ಪೋಷಕರನ್ನು ಕರೆದು ಮಾಹಿತಿ ನೀಡಿದರು.
ತನಿಖೆ ವೇಳೆ ವಿದ್ಯಾರ್ಥಿಯ ಎಲೆಕ್ಟ್ರಾನಿಕ್ ಉಪಕರಣಗಳಿಂದ ಸುಮಾರು ಏಐ ಬಳಸಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೊ ಮತ್ತು ವೀಡಿಯೋಗಳ 1000 ಚಿತ್ರಗಳನ್ನು ಪತ್ತೆ ಹಚ್ಚಿದ್ದು, ಸೈಬರ್ ತಜ್ಞರ ಸಂಪರ್ಕದಿಂದ ವೀಡಿಯೋ ಹಾಗೂ ಫೋಟೊಗಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ದೃಶ್ಯಗಳು ಕಾಲೇಜಿನ ಹೊರಗೆ ಅಥವಾ ಬೇರೆಡೆ ಹಂಚಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ರಾಖಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಆಶಿಶ್ ರಜಪೂತ್ ಪ್ರಕರಣದ ಮಾಹಿತಿ ಬಂದಿದೆ. ಆದರೆ ದೂರು ದಾಖಲಾಗಿಲ್ಲ. ದೂರು ದಾಖಲಾದ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.


