ಮಲಗಿದ್ದ ಪತಿಯ ಮೇಲೆ ಪತ್ನಿ ಕುದಿಯುವ ಎಣ್ಣೆ ಹಾಗೂ ಖಾರದಪುಡಿ ಎರಚಿ ವಿಕೃತಿ ಮೆರೆದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಪತಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.
ಪ್ಯಾರಾಮಚ್ಯುಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 38 ವರ್ಷದ ದಿನೇಶ್ ಅವರನ್ನು ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದ್ದು, ಸುಟ್ಟ ಗಾಯಗಳಿಂದ ಅವರ ಪರಿಸ್ಥಿತಿ ಗಂಭೀರವಾಗಿದೆ.

ಅಕ್ಟೋಬರ್ 2ರಂದು ಕೆಲಸದಿಂದ ಮರಳಿದ ಪತಿ, ರಾತ್ರಿ ಊಟ ಮಾಡಿ ಪತ್ನಿ ಹಾಗೂ ಮಕ್ಕಳ ಜೊತೆ ಮಲಗಿದ್ದ. ರಾತ್ರಿ 3.15ರ ಸುಮಾರಿಗೆ ಏನೋ ನೋವಾಗುತ್ತಿರುವಂತೆ ಭಾಸವಾಗಿ ಎದ್ದಾಗ ಪತ್ನಿ ಪ್ಯಾಂಟ್ ಒಳಗೆ ಕಾದ ಎಣ್ಣೆ ಸುರಿದಿರುವುದು ಕಂಡು ಹೌಹಾರಿ ನೋವಿನಿಂದ ಕಿರುಚಾಡಿದ್ದಾನೆ.
ನೋವಿನಿಂದ ಕಿರುಚಾಡುತ್ತಾ ಸಹಾಯಕ್ಕಾಗಿ ಕರೆದಾಗ ಪತ್ನಿ ಖಾರದಪುಡಿ ತಂದು ಎರಚಿದ್ದಾಳೆ. ಅಲ್ಲದೇ ಕಿರುಚಾಡಿದರೆ ಇನ್ನಷ್ಟು ಬಿಸಿ ಎಣ್ಣೆ ಸುರಿಯುವುದಾಗಿ ಬೆದರಿಕೆ ಹಾಕಿದ್ದಾಳೆ.
ಆದರೆ ನೋವು ತಾಳಲಾರದೇ ದಿನೇಶ್ ಕಿರುಚಾಡಿದ್ದರಿಂದ ಅಕ್ಕಪಕ್ಕದ ಮನೆಯವರು ಹಾಗೂ ಕೆಳಗಿನ ಮಹಡಿಯಲ್ಲಿ ವಾಸವಾಗಿದ್ದ ಮನೆಯ ಮಾಲೀಕ ಬಂದಿದ್ದಾರೆ. ಅಕ್ಕಪಕ್ಕದವರು ಬಾಗಿಲು ತೆರೆಯಲು ಕೂಗಿದರೆ ಮಹಿಳೆ ಒಳಗಿನಿಂದ ಚಿಲಕ ಹಾಕಿಕೊಂಡು ಬಾಗಿಲು ತೆರೆಯಲು ನಿರಾಕರಿಸಿದ್ದಾರೆ.
ಕೊನೆಗೆ ಬಾಗಿಲು ತೆರೆದಾಗ ದಿನೇಶ್ ನೋವಿನಿಂದ ಕಿರುಚಾಡುತ್ತಿದ್ದರೆ ಪತ್ನಿ ಮನೆಯೊಳಗೆ ಕೊಠಡಿಯಲ್ಲಿ ಅವಿತು ಕುಳಿತಿದ್ದಾಳೆ ಎಂದು ನೆರೆಯ ಮನೆಯ ಮಹಿಳೆಯ ಮಗಳು ಘಟನೆಯನ್ನು ವಿವರಿಸಿದ್ದಾಳೆ.
ನೆರೆಮನೆಯವರೆಲ್ಲಾ ಸೇರಿ ಘಟನೆಯ ಮಾಹಿತಿ ಇಲ್ಲದ ಕಾರಣ ದಿನೇಶ್ ನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಕೆಳಗಡೆವರೆಗೂ ಬಂದ ಪತ್ನಿ ನಂತರ ತಪ್ಪಿಸಿಕೊಳ್ಳಲು ಬೇರೊಂದು ದಿಕ್ಕಿನತ್ತ ನಡೆದು ಹೋಗುವುದನ್ನು ನೋಡಿ ಅನುಮಾನಗೊಂಡ ನೆರೆಮನೆಯವರು ಆಕೆಯನ್ನು ಆಟೋದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ವೈದ್ಯರು ಗಾಯ ಗಂಭೀರ ಸ್ವರೂಪದಲ್ಲಿದ್ದು, ಜೀವಕ್ಕೆ ಅಪಾಯ ಆಗಬಹುದು ಎಂದು ಹೇಳಿದ್ದಾರೆ.
ದಂಪತಿಗೆ 8 ವರ್ಷಗಳ ಹಿಂದೆ ಮದುವೆ ಆಗಿದ್ದು, ಮಗಳು ಇದ್ದಾಳೆ. ದಂಪತಿ ನಡುವೆ ಪದೇಪದೆ ಜಗಳ ನಡೆಯುತ್ತಿದ್ದು, ಎರಡು ವರ್ಷಗಳ ಹಿಂದೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಂಡಿತ್ತು.


