Wednesday, December 24, 2025
Google search engine
Homeಆರೋಗ್ಯದೇಶದಲ್ಲೇ ಮೊದಲ ಬಾರಿ ಉಪ್ಪಿನ ಸೇವನೆ ಕಡಿತ ಮಾಡಲು ಸಲಹಾ ಸಮಿತಿ ರಚನೆ

ದೇಶದಲ್ಲೇ ಮೊದಲ ಬಾರಿ ಉಪ್ಪಿನ ಸೇವನೆ ಕಡಿತ ಮಾಡಲು ಸಲಹಾ ಸಮಿತಿ ರಚನೆ

ಬೆಂಗಳೂರು: ಕರ್ನಾಟಕದಲ್ಲಿ ಆಹಾರ ಸಂಬಂಧಿತ ಅಪಾಯಗಳನ್ನು ತಡೆಗಟ್ಟುವ ಮೂಲಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುವ ಮಹತ್ವದ ಹೆಜ್ಜೆಯಾಗಿ, ದೇಶದಲ್ಲಿಯೇ ಮೊದಲ ಬಾರಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಉಪ್ಪಿನ ಸೇವನೆ ಕಡಿತಗೊಳಿಸುವ ಕಾರ್ಯಯೋಜನೆಗೆ ಮಾರ್ಗದರ್ಶನ ನೀಡುವ `ತಾಂತ್ರಿಕ ಸಲಹಾ ಸಮಿತಿ’ ರಚಿಸಲಾಯಿತು.

ರಾಜ್ಯದಾದ್ಯಂತ ಸಾಂಕ್ರಾಮಿಕವಲ್ಲದ ರೋಗಗಳನ್ನು (NCDs) ತಡೆಗಟ್ಟುವ ಉದ್ದೇಶದಿಂದ, ವಿಶನ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ (VSD) ಹಾಗೂ ರಿಸಾಲ್ವ್ ಟು ಸೇವ್ ಲೈವ್ಸ್ (RTSL) ಸಂಸ್ಥೆಗಳ ಸಹಯೋಗದೊಂದಿಗೆ ಈ ಸಮಿತಿಯನ್ನು ರಚಿಸಲಾಗಿದ್ದು, ವಿಜ್ಞಾನ ಆಧಾರಿತ ಕ್ರಮಗಳ ಮೂಲಕ ಉಪ್ಪಿನ ಸೇವನೆಯನ್ನು ಕಡಿತಗೊಳಿಸುವುದು ಹಾಗೂ ಆ ಮೂಲಕ , ರಕ್ತದೊತ್ತಡದ ಅಪಾಯವನ್ನು ತಗ್ಗಿಸಲು ಮಾರ್ಗಸೂಚಿಗಳನ್ನು ಕಂಡುಹಿಡಿಯಲು ನಿರ್ಣಯಿಸಲಾಯಿತು.

ಸಾರ್ವಜನಿಕ ಆರೋಗ್ಯ ತಜ್ಞರು, ಕಾನೂನು ತಜ್ಞರು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ, ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಮತ್ತು ಉಪ್ಪು ಸೇವನೆಗೆ ಕಡಿವಾಣ ಹಾಕುವ, ಆ ಮೂಲಕ ಸಾಂಕ್ರಾಮಿಕವಲ್ಲದ ರೋಗಗಳನ್ನು (NCDs) ತಡೆಗಟ್ಟುವ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸುವ ಮಾರ್ಗಸೂಚಿಯನ್ನು ರೂಪಿಸುವುದು ಸಮಿತಿಯ ಉದ್ದೇಶ.

ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಕರ್ನಾಟಕದಲ್ಲಿ ಪೌಷ್ಟಿಕಾಂಶ ಉತ್ತೇಜಿಸಲು ಮತ್ತು ಆರೋಗ್ಯ ಉಪಕ್ರಮಗಳನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ. ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಸಂಬಂಧಿಸಿದ ಯಾವುದೇ ಉಪಕ್ರಮಗಳಿಗೆ ನಮ್ಮ ಬೆಂಬಲ ಇರುತ್ತದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ., ದೇಶದ ಪ್ರಮುಖ ಆರೋಗ್ಯ ವಿಶ್ವವಿದ್ಯಾಲಯವಾಗಿ ನಾವು ಕೇವಲ ದಾಖಲಾತಿ, ಪರೀಕ್ಷೆ, ಫಲಿತಾಂಶ ಹಾಗೂ ತರಗತಿಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿ ಉಳಿಯಬಾರದು. ನಾವು ನಮ್ಮ ಭವಿಷ್ಯ ಎಂದೇ ನಂಬಿರುವ ನಮ್ಮ ಯುವ ಪೀಳಿಗೆ ಸಣ್ಣ ವಯಸ್ಸಿನಲ್ಲಿಯೇ ಅಧಿಕರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳಿಗೆ ಈಡಾಗುತ್ತಿರುವುದು ಕಳವಳಕಾರಿ. ಈ ನಿಟ್ಟಿನಲ್ಲಿ ಅಧಿಕರಕ್ತದೊತ್ತಡಕ್ಕೆ ಮುಖ್ಯ ಕಾರಣವಾಗಿರುವ ಅತಿಯಾದ ಉಪ್ಪಿನ ಬಳಕೆಯ ಬಗ್ಗೆ ಅರಿವು ಮೂಡಿಸಲು ನಾವು ದೇಶದಲ್ಲಿಯೇ ಮೊದಲ ಬಾರಿ ತಜ್ಞರ ಸಮಿತಿ ರಚನೆ ಮಾಡುತ್ತಿದ್ದೇವೆ ಎಂದರು.

ವಿಜ್ಞಾನ, ನೀತಿ ಮತ್ತು ಸಮುದಾಯವನ್ನು ಒಟ್ಟುಗೂಡಿಸುವ ಈ ಉಪಕ್ರಮವನ್ನು ಆಯೋಜಿಸಲು ನಮಗೆ ಹೆಮ್ಮೆ ಎನಿಸುತ್ತಿದೆ. ಸಂಶೋಧನೆ, ತರಬೇತಿ ಮತ್ತು ಸಾಂಸ್ಥಿಕ ಸಹಯೋಗಗಳ ಮೂಲಕ, ಆಹಾರ ಅಪಾಯಗಳನ್ನು ತಡೆಗಟ್ಟುವ ಮತ್ತು ಆರೋಗ್ಯಕರ ಆಹಾರ ವ್ಯವಸ್ಥೆಗಳ ಮೂಲಕ ಕರ್ನಾಟಕವನ್ನು ಮಾದರಿಯನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಉಪ್ಪಿನ ಅತಿಯಾದ ಬಳಕೆಯಿಂದ ಎದುರಾಗಬಹುದಾದ ಆರೋಗ್ಯ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಈ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಿದರು.

RTSL ಇಂಡಿಯಾ (Resolve to Save Lives, India) ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸೈಯದ್ ಇಮ್ರಾನ್ ಫಾರೂಕ್, ಅಂತರ ಸಂಪರ್ಕ ಸಹಯೋಗದ ಮಹತ್ವವನ್ನು ಒತ್ತಿ ಹೇಳಿದರು. ’ಉಪ್ಪು ಸೇವನೆಗೆ ಕಡಿವಾಣ ಹಾಕುವುದು ಅತ್ಯಂತ ಪರಿಣಾಮಕಾರಿ ಸಾರ್ವಜನಿಕ ಆರೋಗ್ಯ ಪರಿಹಾರಗಳಲ್ಲಿ ಒಂದಾಗಿದೆ. ಕರ್ನಾಟಕವು ಸೋಡಿಯಂ ಬಳಕೆಯನ್ನು ಕಡಿಮೆ ಮಾಡುವುದಲ್ಲದೆ ಅದರಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ವಿಧಾನಗಳನ್ನು ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕಾಗಿದೆ. ಸಾರ್ವಜನಿಕ ಆರೋಗ್ಯದಲ್ಲಿ ಸುಸ್ಥಿರ ಸುಧಾರಣೆಗಳನ್ನು ತರುವ ಮಾರ್ಗಗಳನ್ನು ಕಾರ್ಯರೂಪಕ್ಕೆ ತರುವ ರಾಜ್ಯದ ಪ್ರಯತ್ನವನ್ನು ಬೆಂಬಲಿಸಲು RTSL ಇಂಡಿಯಾ ಬದ್ಧವಾಗಿದೆ ಎಂದರು.

ಕರ್ನಾಟಕ ಸರ್ಕಾರದ ಉನ್ನತ ಅಧಿಕಾರ ಸಮಿತಿಯ ಸದಸ್ಯರಾದ ಡಾ. ವಿಶಾಲ್ ರಾವ್ ಯು.ಎಸ್., ಆಹಾರ ಪದ್ಧತಿ ಮತ್ತು ದೀರ್ಘಕಾಲೀನ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದರು. ಭಾರತದಲ್ಲಿ ನಾವು ಚಿಕಿತ್ಸೆಗೆ ನೀಡುವಷ್ಟೇ ಪ್ರಾಧಾನ್ಯತೆಯನ್ನು ಮುನ್ನೆಚ್ಚರಿಕೆಗೆ ನೀಡಿದಲ್ಲಿ ಇಲ್ಲಿನ ಆರೋಗ್ಯ ಸಮಸ್ಯೆ ಅರ್ಧದಷ್ಟು ಇಳಿಮುಖವಾಗುತ್ತದೆ. ಆಧುನಿಕ ಭಾರತದ ಬಹುದೊಡ್ಡ ಕಳವಳವಾಗಿರುವ ಅತಿಯಾದ ಉಪ್ಪಿನ ಬಳಕೆಗೆ ಕಡಿವಾಣ ಹಾಕಲು ಮತ್ತು ಆ ಮೂಲಕ ಜೀವನ ಶೈಲಿ ಸಂಬಂಧಿತ ರೋಗಗಳನ್ನು ತಡೆಯಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ದೇಶದಲ್ಲಿ ಮೊದಲು ಎನ್ನಬಹುದಾದ ಈ ಉಪಕ್ರಮಕ್ಕೆ ಮುಂದಾಗಿರುವುದು ಹೆಮ್ಮೆಯ ವಿಷಯ. ಇಂತಹ ವಿಶ್ವವಿದ್ಯಾಲಯದ ಜೊತೆಗೆ ಸಹಯೋಗ ಹೊಂದಲು ನಮಗೆ ಸಂತಸ ಎನಿಸುತ್ತಿದೆ ಎಂದರು.

ಇದೇ ವೇಳೆ ವೈದ್ಯರ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯದಲ್ಲಿ ಉಪ್ಪು ಸೇವನೆಗೆ ಕಡಿವಾಣ ಹಾಕುವ ಉಪಕ್ರಮವನ್ನು ವಿಸ್ತರಿಸುವ ಬಗ್ಗೆ, ನಿರ್ದಿಷ್ಟ ಕ್ರಿಯಾ ಯೋಜನೆಗಳ ಬಗ್ಗೆ ತಜ್ಞರು ಚರ್ಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments