ಪಾಕಿಸ್ತಾನಿ ವಾಯುಪಡೆ ನಡೆಸಿದ ದಾಳಿಗೆ ಪ್ರತಿಕಾರವಾಗಿ ನಡೆಸಿದ ದಾಳಿಯಲ್ಲಿ 58 ಪಾಕಿಸ್ತಾನಿ ಯೋಧರನ್ನು ಹತ್ಯೆಗೈಯ್ಯಲಾಗಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಆಫ್ಘಾನಿಸ್ತಾನ ಆಡಳಿತದಲ್ಲಿರುವ ತಾಲಿಬಾನ್ ಹೇಳಿಕೊಂಡಿದೆ.
ಪಾಕಿಸ್ತಾನ ವಾಯುಪಡೆಗಳು ಇತ್ತೀಚೆಗೆ ನಡೆಸಿದ್ದಕ್ಕ ಪ್ರತಿಯಾಗಿ ಆಫ್ಥಾನಿಸ್ತಾನ ಗಡಿಯಲ್ಲಿರುವ ಪಾಕಿಸ್ತಾನದ ನೆಲೆಗಳನ್ನು ಗುರಿಯಾಗಿಸಿ ತಾಲಿಬಾನ್ ಬಂಡುಕೋರರು ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಸೇನೆ ಐಸಿಸ್ ಉಗ್ರರಿಗೆ ನೀಡುತ್ತಿರುವ ಬೆಂಬಲ ವಾಪಸ್ ಪಡೆಯಬೇಕು ಹಾಗೂ ಶಾಂತಿ ಕಾಪಾಡದೇ ಇದ್ದರೆ ದಾಳಿಯನ್ನು ತೀವ್ರಗೊಳಿಸುವುದಾಗಿ ಆಫ್ಘಾನಿಸ್ತಾನ ಎಚ್ಚರಿಸಿದೆ.
ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ 20 ತಾಲಿಬಾನ್ ಯೋಧರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಆಕ್ರಮಣ ಹತ್ತಿಕ್ಕುವವರೆಗೂ ದಾಳಿ ಮುಂದುವರಿಯಲಿದೆ ಎಂದು ಆಫ್ಘಾನಿಸ್ತಾನ ಹೇಳಿಕೊಂಡಿದೆ.
ಹೆಲ್ಮಂಡ್ ಪ್ರಾಂತ್ಯದ ವಕ್ತಾರ ಮವ್ಲಾವಿ ಮೊಹಮದ್ ಖಾಸಿಂ ರಿಯಾಜ್ ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಬ್ರಹ್ಮಾಪುರ್ ಜಿಲ್ಲೆಯ ಡುರಾಂಡ್ ಲೈನ್ ಬಳಿ ಪಾಕಿಸ್ತಾನ ಸೈನಿಕರಿಗೆ ಪ್ರತಿರೋಧ ಒಡ್ಡಿದ ತಾಲಿಬಾನ್ ಸೇನೆ 15 ಪಾಯ್ ಯೋಧರನ್ನು ಹತ್ಯೆಗೈದಿರುವುದಾಗಿ ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆ ಹಿಡಿತದಲ್ಲಿದ್ದ ಔಟ್ ಪೋಸ್ಟ್ ಗಳನ್ನು ಮರುವಶ ಪಡೆಯಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಕಾಬೂಲ್ ಮತ್ತು ಪಕ್ತಿಕಾ ಪ್ರಾಂತ್ಯವನ್ನು ಕೇಂದ್ರೀಕರಿಸಿ ಪಾಕಿಸ್ತಾನ ವಾಯುಪಡೆಗಳು ದಾಳಿ ನಡೆಸಿದ್ದವು. ಈ ವೇಳೆ ಪಾಕಿಸ್ತಾನದ 6 ಮಂದಿ ನಾಗರಿಕರ ಕುಟುಂಬ ಮೃತಪಟ್ಟಿತ್ತು. ಈ ದಾಳಿ ಹಿನ್ನೆಲೆಯಲ್ಲಿ ತಾಲಿಬಾನ್ ಪ್ರತೀರೋಧ ಒಡ್ಡಲು ಆರಂಭಿಸಿದೆ.
ಪಾಕಿಸ್ತಾನದ ವಶದಲ್ಲಿರುವ ಪಾಕಿಸ್ತಾನ ಮತ್ತು ಆಫ್ಥಾನಿಸ್ತಾನ ಗಡಿ ಭಾಗದಲ್ಲಿರುವ ಹೆಲ್ಮಂಡ್, ಕಂದಹಾರ್, ಜಬುಲ್, ಪಕ್ತಿಕಾ, ಪಕ್ತಿಯಾ, ಖೋಸ್ಟ್, ನಂನ್ಗಾರ್ ಮತ್ತು ಕುನಾರ್ ಔಟ್ ಪೋಸ್ಟ್ ಗಳನ್ನು ಗುರಿಯಾಗಿ ತಾಲಿಬಾನ್ ದಾಳಿ ನಡೆಸಿದೆ.


