ಹಸು ಮೇಯಿಸಲು ಹೋಗಿದ್ದ ವೃದ್ಧನನ್ನು ಹುಲಿ ಬೇಟೆಯಾಡಿದ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಕುರ್ಣೆಗಾಲದಲ್ಲಿ ನಡೆದಿದೆ.
ಕೂಡಗಿ ಗ್ರಾಮದ ದೊಡ್ಡನಿಂಗಯ್ಯ (65) ಹುಲಿ ದಾಳಿಗೆ ಬಲಿಯಾದವರು. ಕಾಡಂಚಿನ ಗ್ರಾಮ ಸರಗೂರು ತಾಲ್ಲೂಕಿನ ಕುರ್ಣೇಗಾಲದಲ್ಲಿ ನಿಂಗಯ್ಯ ಹಸು ಮೇಯಿಸುತ್ತಿದ್ದಾಗ ಹುಲಿ ದಾಳಿ ಮಾಡಿದ್ದು ನಿಂಗಯ್ಯ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ದೌಡಾಯಿಸಿದ್ದಾರೆ.
ಸರಗೂರು ತಾಲ್ಲೂಕಿನಲ್ಲೇ ಐದು ದಿನಗಳ ಅಂತರದಲ್ಲಿ ಎರಡು ಹುಲಿ ದಾಳಿ ಪ್ರಕರಣಗಳು ವರದಿಯಾಗಿದೆ. ಇತ್ತೀಚೆಗೆ ಅಕ್ಟೋಬರ್ 26 ರಂದು ಸರಗೂರು ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ ಎಂಬುವವರ ಮೇಲೆ ಹುಲಿ ದಾಳಿಯಾಗಿತ್ತು.
ನಂಜನಗೂಡು ಗುಂಡ್ಲುಪೇಟೆ, ಎಚ್.ಡಿ ಕೋಟೆ ಮತ್ತು ಸರಗೂರು ತಾಲ್ಲೂಕುಗಳಿಗೆ ಹೊಂದಿಕೊಂಡಿರುವ ಕಾಡಂಚಿನ ಗ್ರಾಮಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷ ಪ್ರಕರಣಗಳು ನಡೆಯಿತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದ್ದು ಇನ್ನೆಷ್ಟು ಜೀವಗಳ ಬಲಿ ಪಡೆಯಲು ಅರಣ್ಯ ಇಲಾಖೆ ಕಾಯುತ್ತಿದೆಯೋ ಗೊತ್ತಿಲ್ಲ ಎಂದು ಕಾಡಂಚಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.


