ಇಬ್ಬರು ಮಕ್ಕಳು ಸೇರಿದಂತೆ 13 ಜನರ ಸಾವಿಗೆ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರ ನಡುವೆ ಆರಂಭವಾದ ಜಗಳ ಕಾರಣ ಎಂಬುದು ತಿಳಿದು ಬಂದಿದೆ.
ಏಕಾದಶಿ ಪ್ರಯುಕ್ತ ದೇವರ ದರ್ಶನದ ವೇಳೆ ಸಂಭವಿಸಿದ ನೂಕುನುಗ್ಗಲಿನಿಂದ ಇಬ್ಬರು ಮಕ್ಕಳು ಹಾಗೂ 9 ಮಹಿಳೆಯರು ಸೇರಿದಂತೆ 13 ಮಂದಿ ಮೃತಪಟ್ಟಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ 4 ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡ ಕಾಶಿಬುಗ್ಗ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಕಾಮಗಾರಿ ಇನ್ನೂ ಪ್ರಗತಿಯಲ್ಲಿ ಇರುವಾಗಲೇ ಈ ದುರಂತ ಸಂಭವಿಸಿದೆ.
95 ವರ್ಷದ ಹರಿ ಮುಕುಂದ ಪಾಂಡೆ ಅವರ ಮಾಲೀಕತ್ವದ ಈ ವೆಂಕಟೇಶ್ವರ ದೇವಸ್ಥಾನಕ್ಕೆ ಸರಿ ಸುಮಾರು ನಿತ್ಯ 2000 ಜನರು ಭೇಟಿ ನೀಡುತ್ತಿದ್ದರು. ಆದರೆ ಕಾರ್ತಿಕ ಮಾಸದ ಮೊದಲ ಏಕಾದಶಿ ಪ್ರಯುಕ್ತ ನಿರೀಕ್ಷೆಗೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿದ್ದರು.
ನಿರೀಕ್ಷೆಗೂ ಮೀರಿ ಜನರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಇರುವುದು ದುರಂತಕ್ಕೆ ಮತ್ತೊಂದು ಕಾರಣವಾದರೆ, ದೇವರ ವಿಗ್ರಹ ಬರುವ ವೇಳೆ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರ ನಡುವೆ ಆರಂಭವಾದ ವಾಗ್ವಾದ ವಿಕೋಪಕ್ಕೆ ತಿರುಗಿದ್ದರಿಂದ ಕಾಲ್ತುಳಿತ ಸಂಭಿವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರ ಕುಟುಂಬಗಳಿಗೆ ಪ್ರಧಾನಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಮೊತ್ತ ಘೋಷಿಸಲಾಗಿದೆ.
ದೇವಸ್ಥಾನದ ಆವರಣದಲ್ಲಿ ಭಕ್ತರ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಭಯಾನಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಘಾತ ವ್ಯಕ್ತಪಡಿಸಿದ್ದು, ಭಕ್ತರ ಸಾವು ಹೃದಯವಿದ್ರಾವಕ ಎಂದು ವಿಷಾದಿಸಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಕಾಲ್ತುಳಿತ ಘಟನೆ ಆಘಾತವನ್ನುಂಟು ಮಾಡಿದೆ. ಈ ದುರಂತ ಘಟನೆಯಲ್ಲಿ ಭಕ್ತರ ಸಾವು ಅತ್ಯಂತ ಹೃದಯವಿದ್ರಾವಕವಾಗಿದೆ. ತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರಿಗೆ ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ನಾಯ್ಡು ತಿಳಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವಂತೆ ಸಿಎಂ ಹೇಳಿದ್ದಾರೆ.


