ಗಂಡನ ಜೊತೆಗಿನ ಪದೇಪದೆ ಜಗಳದಿಂದ ಬೇಸತ್ತ ಪತ್ನಿ ಕೊಲೆ ಮಾಡಿ ದರೋಡೆ ಕಥೆ ಕಟ್ಟಲು ಯತ್ನಿಸಿದ್ದು, ಕೊಲೆ ಯತ್ನದಿಂದ ಗಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ನಂಜನಗೂಡು ಪಟ್ಟಣದಲ್ಲಿ ಪತ್ನಿ ಸಂಗೀತಾ ಸಹೋದರ ಸಂಜಯ್ ಜೊತೆಗೂಡಿ ಗಂಡ ರಾಜೇಂದ್ರನ ಕೊಲೆಗೆ ಯತ್ನಿಸಿದ್ದಾರೆ. ಸಂಜಯ್ ಕೊಲೆಗೆ ವಿಘ್ನೇಶ್ ಹಾಗೂ ಬಾಲಕ ಕೂಡ ಸೇರಿಕೊಂಡಿದ್ದಾನೆ,
ಅಕ್ಟೋಬರ್ 25ರಂದು ಗಂಡನ ಕೊಲೆಗೆ ಪ್ರಯತ್ನ ನಡೆದಿದ್ದು, ರಾಜೇಂದ್ರ ಸ್ವಲ್ಪದರಲ್ಲಿ ಈ ಕೊಲೆಯಿಂದ ಪಾರಾಗಿದ್ದಾರೆ. ನಂಜನಗೂಡು ಪೊಲೀಸರು ಈಗ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ.
ಕಳೆದ ಕೆಲ ತಿಂಗಳಿಂದ ಇಬ್ಬರ ನಡುವೆ ಚಿಕ್ಕಚಿಕ್ಕ ವಿಷಯಗಳಿಗೆ ನಡೆಯುತ್ತಿದ್ದ ಜಗಳದಿಂದ ಬೇಸತ್ತ ಸಂಗೀತಾ ಗಂಡನಿಂದ ದೂರವಾಗಲು ಬಯಸಿದ್ದಳು. ಆದರೆ ದೂರ ಅಗುವ ಬದಲು ಕಾಯಂ ಆಗಿ ಗಂಡನನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದು ಇದಕ್ಕಾಗಿ ಸಹೋದರ ಸಂಜಯ್ ನೆರವು ಪಡೆದಿದ್ದಾಳೆ.
ರಾಜೇಂದ್ರ ಸ್ಕೂಟರ್ನಲ್ಲಿ ಹೊರಟಾಗ ಅಡ್ಡಗಟ್ಟಿ, ಚಿನ್ನ ಕಸಿಯುವಂತೆ ನಟಿಸಿ ಹಲ್ಲೆ ನಡೆಸಿ ಕೊಲೆ ಮಾಡಲು ಸಂಚು ರೂಪಿಸಿದ್ದರು.
ಅಕ್ಟೋಬರ್ 25ರಂದು ಬೆಳಿಗ್ಗೆ ರಾಜೇಂದ್ರ ಸ್ಕೂಟರ್ನಲ್ಲಿ ನಂಜನಗೂಡಿನಿಂದ ಹೊರಟಿದ್ದರು. ಅವರ ಹಿಂದೆಯೇ ಸಂಗೀತಾ ಸಹೋದರ ಸಂಜಯ್ ಮತ್ತು ಗ್ಯಾಂಗ್ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಒಂದು ಒಂಟಿ ರಸ್ತೆಯಲ್ಲಿ ಅಡ್ಡಗಟ್ಟಿ, ರಾಜೇಂದ್ರನ ಸ್ಕೂಟರ್ ತಡೆದಿದ್ದಾರೆ.
ಸಂಜಯ್ ಚಿನ್ನದ ಆಭರಣಗಳನ್ನು ಕಸಿಯುವ ನೆಪದಲ್ಲಿ ರಾಜೇಂದ್ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದೇ ಸಮಯದಲ್ಲಿಸ್ಥಳಕ್ಕೆ ಬೇರೊಂದು ಕಾರು ಬಂದಿದೆ, ಇದನ್ನು ಕಂಡ ತಕ್ಷಣವೇ ಆರೋಪಿಗಳು ಭಯಪಟ್ಟು ಪರಾರಿಯಾಗಿದ್ದಾರೆ. ಇದರಿಂದ ರಾಜೇಂದ್ರ ಗಾಯಗೊಂಡರೂ ಪ್ರಾಣಾಪಾಯದಿಂದ ಪಾರಾಗಿದ್ದರು.
ಘಟನೆಯ ನಂತರ ರಾಜೇಂದ್ರ ತಕ್ಷಣ ನಂಜನಗೂಡು ಪೊಲೀಸ್ ಠಾಣೆಗೆ ದೂರು ನೀಡಿದರು. ದರೋಡೆಯಂತೆ ನಡೆದಿದ್ದ ಈ ಘಟನೆಯನ್ನು ಆರಂಭದಲ್ಲಿ ಸಾಮಾನ್ಯ ದಾಳಿಯಂತೆ ಭಾವಿಸಿದ್ದ ಪೊಲೀಸರು, ವಿಚಾರಣೆ ವೇಳೆ ಕೊಲೆ ಪ್ರಯತ್ನದ ಮಾಹಿತಿ ಪಡೆಯುತ್ತಿದ್ದಂತೆ ದಂಗಾಗಿದ್ದಾರೆ.
ಸಂಗೀತಾ, ಸಂಜಯ್, ವಿಘ್ನೇಶ್ ಮತ್ತು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪ;ಡೆದು ವಿಚಾರಣೆ ನಡೆಸಿದಾಗ ಸಂಗೀತಾ ಸತ್ಯ ಬಾಯಿ ಬಿಟ್ಟಿದ್ದಾಳೆ. “ಕಲಹಗಳಿಂದ ತುಸು ಆತಂಕವಾಯಿತು. ಸಹೋದರನ ಸಹಾಯದಿಂದ ಈ ರೀತಿ ಮಾಡಿದೆ” ಎಂದು ಆಕೆ ಹೇಳಿದ್ದಾಳೆ.
ಆರೋಪಿಗಳ ವಿರುದ್ಧ ಐಪಿಸಿ 307 (ಕೊಲೆ ಪ್ರಯತ್ನ), 120ಬಿ ಸೇರಿ ವಿವಿಧ ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿದೆ. ಅಪ್ರಾಪ್ತ ಬಾಲಕನನ್ನು ಜುವೆನೈಲ್ ಕೋರ್ಟ್ಗೆ ಹಸ್ತಾಂತರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಂದ್ರ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ.


