ಬಿಜೆಪಿ ಪಕ್ಷಕ್ಕೆ ಪೂರ್ಣ ಬಹುಮತ ಲಭಿಸದೇ ಇದ್ದರೂ ಎನ್ ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಲಭಿಸಿರುವ ಹಿನ್ನೆಲೆಯಲ್ಲಿ 3ನೇ ಬಾರಿ ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿದೆ.
ಪ್ರಧಾನಿ ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ನಿರೀಕ್ಷಿತ ಫಲಿತಾಂಶ ಪಡೆಯಲಿಲ್ಲ. ಅಲ್ಲದೇ ಮೋದಿ ಸಂಪುಟದಲ್ಲಿದ್ದ 16ಕ್ಕೂ ಹೆಚ್ಚು ಸಚಿವರು ಸೋಲುಂಡಿದ್ದಾರೆ. ಅಲ್ಲದೇ ಬಿಜೆಪಿ 350ಕ್ಕೂ ಅಧಿಕ ಸ್ಥಾನದಲ್ಲಿ ಗೆಲ್ಲಲಿದೆ ಎಂಬ ನಿರೀಕ್ಷೆ ಸುಳ್ಳಾಗಿದ್ದು, 241 ಸ್ಥಾನಕ್ಕೆ ಕುಸಿದಿದೆ.
ಇದರಿಂದ ಮಿತ್ರಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಬೇಕಾದ ಸ್ಥಿತಿಗೆ ಬಿಜೆಪಿ ತಲುಪಿದ್ದು, ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೂ ಈ ಪಕ್ಷಗಳ ಸಲಹೆ ಪಡೆಯಬೇಕಾಗುತ್ತದೆ.
ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸಿದ್ದ ಬಿಜೆಪಿ ಕಳಪೆ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಮೋದಿ ಮತ್ತೆ ಪ್ರಧಾನಿ ಹುದ್ದೆ ಅಲಂಕರಿಸುತ್ತಾರೋ ಅಥವಾ ಎರಡರಿಂದ ಮೂರು ವರ್ಷಗಳ ಕಾಲ ಪ್ರಧಾನಿ ಆಗಿದ್ದು ನಂತರ ಬೇರೆಯವರಿಗೆ ಬಿಟ್ಟುಕೊಡುತ್ತಾರೋ ಎಂಬ ಕುತೂಹಲ ಬಿಜೆಪಿ ಪಾಳಯದಲ್ಲಿದೆ.
ಮಿತ್ರಪಕ್ಷಗಳ ಪೈಕಿ ಜೆಡಿಯುನ ನಿತೀಶ್ ಕುಮಾರ್ ನಡೆ ನಿಗೂಢವಾಗಿದ್ದು, ಪ್ರಧಾನಿ ಪಟ್ಟದ ಆಕಾಂಕ್ಷಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇಂಡಿಯಾ ಮೈತ್ರಿಕೂಟದ ಕಡೆ ವಾಲುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇದೆಲ್ಲದರ ನಡುವೆ ಇಂಡಿಯಾ ಮೈತ್ರಿಕೂಟ ಇಂದು ಸಭೆ ಕರೆದಿದ್ದು, ಮೈತ್ರಿಕೂಟದ ಸಭೆಯಲ್ಲಿ ಸರ್ಕಾರ ರಚನೆ ಕುರಿತು ತಂತ್ರಗಾರಿಕೆ ರೂಪಿಸುವ ಸಾಧ್ಯತೆ ಇದೆ. ಈ ಸಭೆಗೆ ನಿತೀಶ್ ಕುಮಾರ್ ಬರುತ್ತಾರಾ ಎಂಬ ಕುತೂಹಲ ಮೂಡಿದೆ. ಮತ್ತೊಂದೆಡೆ ತೆಲುಗುದೇಶಂನ ಚಂದ್ರಬಾಬು ನಾಯ್ಡು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.