ನಿಂತಿದ್ದ ಟ್ರಕ್ ಗೆ ಟೆಂಪೊ ಟ್ರಾವೆಲ್ಸರ್ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ಭಾನುವಾರ ಸಂಭವಿಸಿದೆ.
ಭಾರತ್ ಮಾಲಾ ಎಕ್ಸ್ ಪ್ರೆಸ್ ವೇನಲ್ಲಿ ಭಾನುವಾರ ಸಂಜೆ ಕೋಲಾಯತ್ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದ ಟೆಂಪೋ ಟ್ರಾವೆಲರ್ಸ್ ಡಿಕ್ಕಿ ಹೊಡೆದಿದೆ. ಮೃತಪಟ್ಟವರೆಲ್ಲರೂ ಜೋಧಪುರದ ಫಲ್ಹೋಡಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಗ್ರೀನ್ ಕಾರಿಡಾರ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಶಾಲಾ ಪುಸ್ತಕಗಳನ್ನು ಸಾಗಿಸುವ ಟ್ರಕ್ ಗೆ ಅತ್ಯಂತ ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಟೆಂಪೊದ ಸೀಟುಗಳಿಗೆ ಮೃತರ ಶವಗಳು ಅಂಟಿಕೊಂಡಿದ್ದು, ಹೊರಗೆ ತೆಗೆಯಲು ರಕ್ಷಣಾ ಸಿಬ್ಬಂದಿ ಪರದಾಡುವಂತಾಗಿತ್ತು. ಅಲ್ಲದೇ ಕೆಲವು ಶವಗಳನ್ನು ಗುರುತಿಸಲೂ ಆಗದಷ್ಟು ನಜ್ಜುಗುಜ್ಜಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ.


