ಸಸ್ಯಹಾರ ಮತ್ತು ಮಾಂಸಹಾರ ಸೇವನೆ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ಎರಡರಲ್ಲಿ ಯಾವುದು ಶ್ರೇಷ್ಠ ಎಂಬ ವಾದಗಳು ನಡೆಯುತ್ತಲೇ ಇದೆ. ಆದರೆ ಸಸ್ಯಹಾರ ಅಥವಾ ಮಾಂಸಹಾರ ಸೇವಿಸುವವರ ಸಂಖ್ಯೆಯೇನೂ ಕಡಿಮೆ ಆಗುತ್ತಿಲ್ಲ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಮನುಷ್ಯರ ಸಂಖ್ಯೆ ಎಷ್ಟು ಇದೆಯೋ ಅದರ ಮೂರು ಪಟ್ಟು ಪ್ರಾಣಿಗಳು ಮನುಷ್ಯರ ಹೊಟ್ಟೆ ಸೇರುತ್ತಿದೆ.
ಹೌದು, ನೀವು ನಂಬದೇ ಇದ್ದರೂ ಇದು ಸತ್ಯ. ಎಕನಾಮಿಕ್ಸ್ ಟೈಮ್ಸ್ ನಲ್ಲಿ ಪ್ರಕಟವಾದ ವರದಿ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ ಮಾಂಸಹಾರ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ನಂ.1 ಸ್ಥಾನದಲ್ಲಿ ಭಾರತ ಇದ್ದರೂ ಮಾಂಸಹಾರ ಸೇವನೆ ಪ್ರಮಾಣ ಇತರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಆಗಿದೆ.
ಜಗತ್ತಿನಲ್ಲಿ ಅತೀ ಹೆಚ್ಚು ಮಾಂಸ ಮಾರಾಟವಾಗುತ್ತಿರುವುದು ಕೋಳಿ. 19 ಶತಕೋಟಿ ಚಿಕನ್ ಆಹಾರವಾಗಿ ಸೇವಿಸಲಾಗುತ್ತಿದೆ. 1.5 ಶತಕೋಟಿ ಮೀಟ್ ಗೋವುಗಳು ಹೊಟ್ಟೆ ಸೇರುತ್ತಿದ್ದು, ಎರಡನೇ ಸ್ಥಾನದಲ್ಲಿದೆ. ಆದರೆ ಚಿಕನ್ ಗೆ ಹೋಲಿಸಿದರೆ ಮೀಟ್ ಅಥವಾ ಗೋಮಾಂಸ ಸೇವನೆ ಅತ್ಯಂತ ಕಡಿಮೆ ಎಂದೇ ಹೇಳಬಹುದು.
1 ಶತಕೋಟಿಯಷ್ಟು ಆಡು ಅಥವಾ ಕುರಿ ಮತ್ತು ಹಂದಿ ಸೇವಿಸಲಾಗುತ್ತಿದ್ದು, ಅತೀ ಹೆಚ್ಚು ಆಹಾರವಾಗುತ್ತಿರುವ ಪ್ರಾಣಿಗಳ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನ ಪಡೆದಿವೆ.
ಅಂಕಿ ಅಂಶಗಳ ಪ್ರಕಾರ ಪ್ರತಿದಿನ 20 ಕೋಟಿ ಚಿಕನ್ ಮನುಷ್ಯರಿಗೆ ಆಹಾರವಾಗುತ್ತಿದೆ. ಅಂದರೆ ಪ್ರತಿ ನಿಮಿಷಕ್ಕೆ 1.40 ಲಕ್ಷ ಕೋಳಿಗಳು ಬಲಿಯಾಗುತ್ತಿವೆ.
ಸಮುದ್ರ ಪ್ರಾಣಿಗಳಾದ ಸಾರ್ಡಿನೆಸ್ ಎಂಬ ಮೀನು ಆಹಾರವಾಗಿ ಪ್ರತಿ ದಿನ 14 ಶತಕೋಟಿಯಷ್ಟು ಬಳಕೆಯಾಗುತ್ತಿದೆ. ಸಿಗಡಿ ಪ್ರತಿದಿನ 3 ಶತಕೋಟಿಯಷ್ಟು ಹಾಗೂ ಬಾತುಕೋಳಿ 2.9 ಶತಕೋಟಿ ಮತ್ತು ಹೆಬ್ಬಾತು 2.1 ಶತಕೋಟಿಯಷ್ಟು ಆಹಾರವಾಗುತ್ತಿವೆ.
ಇದೆಲ್ಲದಕ್ಕಿಂತ ವಿಶೇಷ ಹಾಗೂ ಅಚ್ಚರಿ ಅಂದರೆ ಮನುಷ್ಯರು ಅಕ್ಟೋಪಸ್ ಮತ್ತು ಶಾರ್ಕ್ ಮೀನುಗಳನ್ನು ಕೂಡ ಯಥೇಚ್ಛವಾಗಿ ಸೇವಿಸುತ್ತಿದ್ದಾರೆ. ಮನುಷ್ಯರ ಹೊಟ್ಟೆ ತುಂಬಿಸಲು 2 ಶತಕೋಟಿಯಷ್ಟು ಆಕ್ಟೋಪಸ್ ಮತ್ತು 10 ಕೋಟಿಯಷ್ಟು ಶಾರ್ಕ್ ಮೀನುಗಳು ಖಾದ್ಯವಾಗಿ ಬದಲಾಗುತ್ತಿವೆ.
ಪ್ರತಿವರ್ಷ 1.5 ಶತಕೋಟಿಯಷ್ಟು ಹಂದಿಗಳನ್ನು ಕೊಲ್ಲಲಾಗುತ್ತಿದೆ. ಇದನ್ನು ಬೇಯಿಸಿದ ಉಪ್ಪು ಬೆರೆಸಿದ ಸಿದ್ಧ ಮಾಂಸ, ಲೆಗ್ ಪೀಸ್, ಸಾಸ್ ರೀತಿಯಲ್ಲಿ ಕಳೆದ 50 ವರ್ಷಗಳಿಂದ ಬಳಸಲಾಗುತ್ತಿದೆ.
ಜಗತ್ತಿನ ವಿವಿಧ ದೇಶಗಳಲ್ಲಿ ಬೇಡಿಕೆ ಇರುವ ಮಾಂಸಗಳ ಸರಬರಾಜಿನಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ವಿವಿಧ ಪ್ರಾಣಿ-ಪಕ್ಷಿಗಳ ಮಾಂಸ ಮಾರಾಟದಿಂದ ಚೀನಾದ ಆರ್ಥಿಕತೆಗೆ ಕೂಡ ಅನುಕೂಲವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಭಾರತ ಕೂಡ ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ ಮಾಂಸ ಸೇವನೆಯಲ್ಲಿ ಹಿಂದೆ ಇದೆ. ಆದರೆ ಮಾಂಸ ಮಾರಾಟ ಹಾಗೂ ರಫ್ತಿನಲ್ಲಿ ಇದೀಗ ಪೈಪೋಟಿ ನೀಡಲು ಆರಂಭಿಸಿದೆ.