ವ್ಯಾಪರ ದೂರುಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೇಡೆಹಳ್ಳಿ, ಕೆಆರ್ ಪುಎಂ ಸೇರಿದಂತೆ ವಿವಿಧ ಹಾಸ್ಟೇಲ್ ಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದ ಅವ್ಯವಸ್ಥೆಗಳ ಬಗ್ಗೆ ವಿವರಿಸಿದರು.
ನಗರದ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಬಾಲಕರ ಹಾಸ್ಟೆಲ್‌ಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅನಿರೀಕ್ಷಿತ ಭೇಟಿ ನೀಡಿದರು.
ಸರ್ಕಾರ ಪ್ರತೀ ಕೋಣೆಗೆ 4 ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದರೂ, ಹಾಸ್ಟೆಲ್ ನಲ್ಲಿ 6-7 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ನಾಲ್ಕು ವಿದ್ಯಾರ್ಥಿಗಳು ಮಂಚಗಳ ಮೇಲೆ ಮಲಗುತ್ತಿದ್ದರೆ, ಉಳಿವರು ನೆಲದಲ್ಲಿ ಮಲಗುತ್ತಿರುವುದು ಕಂಡು ಬಂದಿದೆ.
ಹಾಸ್ಟೆಲ್‌ನಲ್ಲಿ ಯಾವುದೇ ಇಂಡೆಂಟ್ ಮತ್ತು ಸ್ಟಾಕ್ ಪುಸ್ತಕವನ್ನು ನಿರ್ವಹಿಸಲಾಗಿಲ್ಲ, ಇದು ದುರುಪಯೋಗಕ್ಕೆ ದಾರಿ ಮಾಡಿಕೊಡುತ್ತಿದೆ. ಪ್ರತಿ ತಿಂಗಳು ಸಮಾಜ ಕಲ್ಯಾಣ ಇಲಾಖೆಯಿಂದ 25,000 ರೂ. ಮಂಜೂರು ಮಾಡಲಾಗುತ್ತಿದೆ. ಹಾಸ್ಟೆಲ್ ಕ್ರಮಬದ್ಧವಾಗಿ ಇಡಲಾಗಿಲ್ಲ. ನೈರ್ಮಲ್ಯವಿಲ್ಲ. 373 ವಿದ್ಯಾರ್ಥಿಗಳಿಗೆ ಕೇವಲ 38 ಶೌಚಾಲಯಗಳಿದ್ದು, ಅನೈರ್ಮಲ್ಯದಿಂದ ಕೂಡಿವೆ ಎಂಬುದನ್ನು ಗಮನಿಸಿದ ಉಪ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶೀಲನೆ ವೇಳೆ ಲೋಕಾಯುಕ್ತರು, ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿರುವುದು ಕಂಡುಬಂದಿದ್ದು, ತಕಣವೇ ವಾರ್ಡನ್ ಮತ್ತು ಅಡುಗೆ ಸಹಾಯಕರನ್ನು ಹೊರಗಡೆ ಕಳುಹಿಸಿ, ಎಲ್ಲಾ ವಿದ್ಯಾರ್ಥಿಗಳನ್ನು ಕರೆಸಿ ಮಾಹಿತಿ ಪಡೆದು ಕೊಂಡಿದ್ದಾರೆ.
ವಿದ್ಯಾರ್ಥಿಗಳು ತಮಗೆ ನೀಡುವ ಬೆಳೆಗಿನ ಉಪಾಹಾರವು ಗುಣಮಟ್ಟದಿಂದ ಕೂಡಿರುವುದಿಲ್ಲ. ಮಧ್ಯಾಹ್ನ ಮತ್ತು ರಾತ್ರಿ ನೀಡುವ ಅನ್ನ ಬೆಂದಿರುವುದಿಲ್ಲ ಹಾಗೂ ಸಾರಿನಲ್ಲಿ ತರಕಾರಿ ಯಾಗಲಿ, ಬೇಳೆಯಾಗಲಿ ಇಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ವರದಿ ನೀಡಿ ಎಂದು ಲೋಕಾಯುಕ್ತರು, ಪೊಲೀಸರಿಗೆ ಸೂಚಿಸಿದರು.
ಈ ನಡುವೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ ವೀರಪ್ಪ ವಿಜಯನಗರದಲ್ಲಿರುವ ಸರ್ಕಾರಿ ಬಾಲಕರ ವಸತಿ ನಿಲಯಗಳು, ಜಕ್ಕೂರು ಮತ್ತು ಯಲಹಂಕದ ಸರ್ಕಾರಿ ಮಹಿಳಾ ವಸತಿ ನಿಲಯಗಳು ಮತ್ತು ನಗರದ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಪೋಸ್ಟ್ ಮೆಟ್ರಿಕ್/ಪಿಜಿ ಕಾಲೇಜು ಮಹಿಳಾ ವಸತಿ ನಿಲಯಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವಸತಿ ನಿಲಯಗಳನ್ನು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ನಡೆಸುತ್ತಿದ್ದು, ಅಕ್ರಮಗಳನ್ನು ಪರಿಶೀಲಿಸಲು ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ 14 ತಂಡಗಳು ಏಕಕಾಲದಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸಿತು.


