ಪ್ರತಿಪಕ್ಷ ನಾಯಕನನ್ನಾಗಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡಿದೆ.
ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆಗೆ ಕಾರಣರಾದ ರಾಹುಲ್ ಗಾಂಧಿ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕಾಂಗ್ರೆಸ್ ಸಂಸದರು ಅವಿರೋಧವಾಗಿ ರಾಹುಲ್ ಗಾಂಧಿ ಅವರನ್ನು ಪ್ರತಿಪಕ್ಷ ನಾಯಕರಾಗಲು ಒತ್ತಡ ಹೇರಿ ಅವಿರೋಧ ನಿರ್ಣಯ ಕೈಗೊಂಡರು.
2014ರ ನಂತರ ಇದೇ ಮೊದಲ ಬಾರಿ ಕಾಂಗ್ರೆಸ್ ಅಧಿಕೃತವಾಗಿ ಪ್ರತಿಪಕ್ಷ ಸ್ಥಾನ ಅಲಂಕರಿಸಲಿದೆ. ಪ್ರತಿಪಕ್ಷ ಸ್ಥಾನ ಪಡೆಯಬೇಕಾದರೆ ಒಟ್ಟಾರೆ ಲೋಕಸಭಾ ಸ್ಥಾನಗಳ ಪೈಕಿ ಶೇ.10ರಷ್ಟು ಸ್ಥಾನ ಪಡೆಯಬೇಕು. ಈ ಕಾರಣದಿಂದ ಕಾಂಗ್ರೆಸ್ 2014 ಮತ್ತು 2019ರಲ್ಲಿ ಪ್ರತಿಪಕ್ಷ ಸ್ಥಾನ ಪಡೆಯಲು ವಿಫಲವಾಗಿತ್ತು.
ಕೇರಳದ ಸಂಸದ ಶಶಿ ತರೂರ್ ಮತ್ತು ಕರ್ನಾಟಕದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕ ಆಗಬೇಕು ಎಂದು ಪ್ರಸ್ತಾಪ ಮಂಡಿಸಿದರು.