ಮಗನನ್ನು ಕೊಂದ ಬಳಿಕ ತಾಯಿ ಮತ್ತು ಅಜ್ಜಿ ಕೂಡ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಕೋರಮಂಗಲದ ತಾವರೆಕೆರೆ ಬಳಿಯ ಎಸ್.ಜಿ.ಪಾಳ್ಯದಲ್ಲಿ ಮಗ ಮೌನೀಶ್ (14), ತಾಯಿ ಸುಧಾ, ಅಜ್ಜಿ ಮುದ್ದಮ್ಮ ಮೃತಪಟ್ಟಿದ್ದಾರೆ.
ಮೊದಲು ಪುತ್ರನಿಗೆ ವಿಷ ಕುಡಿಸಿ ಬಳಿಕ ತಾಯಿ ಮತ್ತು ಅಜ್ಜಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಎಸ್.ಜಿ.ಪಾಳ್ಯ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಧಾ ಮತ್ತು ಮುದ್ದಮ್ಮ ಮೊದಲು ಸಣ್ಣ ಹೋಟೆಲ್‌ನಲ್ಲಿ ಬಿರಿಯಾನಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಹೋಟೆಲ್ ಲಾಸ್ ಆದ ಬಳಿಕ ಚಿಪ್ಸ್ ಹಾಗೂ ಹಾಲು ಮಾರುತ್ತಿದ್ದರು. ಕೊನೆಗೆ ಮನೆ ಕೆಲಸಕ್ಕೂ ಹೋಗುತ್ತಿದ್ದರು. ಸಾಲ ಹೆಚ್ಚಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸುಧಾ ಅವರು ಕೆಲ ವರ್ಷಗಳ ಹಿಂದೆ ಪತಿಯಿಂದ ಬೇರೆಯಾಗಿದ್ದರು. ತಾಯಿ ಮುದ್ದಮ್ಮ ಜೊತೆಗೆ ಸುಧಾ ಮತ್ತು ಮೌನೀಶ್ ವಾಸಿಸುತ್ತಿದ್ದರು. ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಸ್ಥಳಕ್ಕೆ ಭೇಟಿ ನೀಡಿದ್ದು, ಡೆತ್ನೋಟ್ ಅಥವಾ ಬೇರೆ ಏನಾದರೂ ಇದೆಯಾ ಎಂದು ಪರಿಶೀಲನೆ ಮಾಡಿದ್ದಾರೆ. ಸದ್ಯ ಪೊಲೀಸರು ಮೂವರ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಡಿಸಿಪಿ ಸಾರಾ ಫಾತಿಮಾ ಮಾಧ್ಯಮದ ಜೊತೆ ಮಾತನಾಡಿ, ಸಾವಾಗಿದೆ ಎಂದು 112ಗೆ ಕರೆ ಬಂದಿತ್ತು. ಹಾಗಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಮೂವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮೃತರು ಮೂಲತಃ ತಮಿಳುನಾಡಿನವರು. ನಿನ್ನೆ ಧರ್ಮಪುರಿಯ ಒಂದು ದೇವಾಲಯಕ್ಕೆ ಹೋಗಿ ಬಂದಿದ್ದರು. ಬಾಲಕ ಕ್ರೈಸ್ಟ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸಾವಿಗೆ ಕಾರಣ ಏನು ಎಂಬುದನ್ನು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಹೇಳಿದ್ದಾರೆ.


