ಸುವರ್ಣಸೌಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಟ್ಟಿಮುಟ್ಟಾಗಿದ್ದು, ಅವರ ನಂತರದ ಪರ್ಯಾಯ ನಾಯಕ ಯಾರಾಗಬೇಕೆಂಬುದರ ಬಗ್ಗೆ ಸ್ವತಃ ಸಿದ್ದರಾಮಯ್ಯನವರೇ ನಿರ್ಧರಿಸಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಬಿ.ಕೆ. ಹರಿಪ್ರಸಾದ್ ಅವರು ಸಿದ್ದರಾಮಯ್ಯ ಅವರ ನಂತರ ಅಹಿಂದ ನಾಯಕತ್ವವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ವಹಿಸಿಕೊಂಡರೆ ಸ್ವಾಗತ ಎಂದು ನೀಡಿರುವ ಹೇಳಿಕೆ ಬಗ್ಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳು ಮಾಡಿದ ಪ್ರಸ್ತಾಪದ ಬಗ್ಗೆ ಸಚಿವರು ಈ ಸ್ಪಷ್ಟನೆ ನೀಡಿದರು.
ಹರಿಪ್ರಸಾದ್ ಅವರು ನಮ್ಮ ಪಕ್ಷದ ಅತ್ಯಂತ ಹಿರಿಯ ನಾಯಕರು. ಅವರು ತಮ್ಮ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಆದರೆ, ಕಿಂಗ್ ಈಸ್ ಅಲೈವ್ ಎನ್ನುವಂತೆ ಸಿದ್ದರಾಮಯ್ಯನವರು ಸದೃಢವಾಗಿದ್ದು, ಅಹಿಂದ ಸಮುದಾಯಗಳನ್ನಷ್ಟೇ ಅಲ್ಲ. ಇಡೀ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ಪರ್ಯಾಯ ಎಂಬುದೇ ಅಪ್ರಸ್ತುತವಾಗಿದೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.
ಹಾಗೊಂದು ವೇಳೆ ನಾಯಕತ್ವ ಬದಲಾವಣೆ ಮಾಡಬೇಕೆಂದು ಎನಿಸಿದಾಗ ತಮ್ಮ ಸ್ಥಾನಕ್ಕೆ ಪರ್ಯಾಯ ನಾಯಕರು ಯಾರಾಗಬೇಕೆಂಬುದನ್ನು ಸ್ವತಃ ಸಿದ್ದರಾಮಯ್ಯನವರೇ ಸೂಚಿಸಬೇಕು. ಅಲ್ಲದೇ, ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ ಅವರು ಸೇರಿದಂತೆ ಅನೇಕ ನಾಯಕರು ಈ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಸಚಿವ ಬೈರತಿ ಸುರೇಶ್ ಹೇಳಿದರು.
ಅಹಿಂದ ನಾಯಕತ್ವ ಅಥವಾ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹಿರಿಯ ನಾಯಕರನ್ನು ಒಳಗೊಂಡ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಶಾಸಕರಾಗಿದ್ದಾರೆ. ಅವರು ತಮ್ಮ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಏನೇ ಆದರೂ, ಅಹಿಂದ ನಾಯಕರಾದ ಸಿದ್ದರಾಮಯ್ಯನವರು ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ? ಎಂದು ಸುರೇಶ್ ಪ್ರಶ್ನಿಸಿದರು.


