Wednesday, December 24, 2025
Google search engine
Homeರಾಜ್ಯ14,21,000 ಲಕ್ಷ ರೈತರಿಗೆ 2,249 ಕೋಟಿ ರೂ. ಪರಿಹಾರ ಜಮೆ: ಸಚಿವ ಕೃಷ್ಣಬೈರೇಗೌಡ

14,21,000 ಲಕ್ಷ ರೈತರಿಗೆ 2,249 ಕೋಟಿ ರೂ. ಪರಿಹಾರ ಜಮೆ: ಸಚಿವ ಕೃಷ್ಣಬೈರೇಗೌಡ

ಬೆಳಗಾವಿ: ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ 14,21,000 ಲಕ್ಷ ರೈತರಿಗೆ ರೂ.2,249 ಕೋಟಿ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಶುಕ್ರವಾರ ವಿಧಾನ ಪರಿಷತ್ ಶೂನ್ಯವೇಳೆ ಚರ್ಚೆಯ ಸಂದರ್ಭದಲ್ಲಿ ಕಲಬುರಗಿ ಭಾಗದ ಸದಸ್ಯರಾದ ತಿಮ್ಮಪ್ಪಣ್ಣ ಕಮಕನೂರ ಅವರ ಪ್ರಶ್ನೆಗೆ ಉತ್ತರಿಸಿ ಸಚಿವ ಕೃಷ್ಣ ಬೈರೇಗೌಡ ಅವರು, “ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾರು ಹಂಗಾಮಿನಲ್ಲಿ 3,23,219 ಎಕರೆ ಪ್ರದೇಶದಲ್ಲಿ ಬೆಳೆಹಾನಿ ಉಂಟಾಗಿದೆ. ಎಸ್ಡಿಆರ್ಎಫ್ ನಿಯಮದ ಪ್ರಕಾರ ಬೆಳೆಹಾನಿಗೆ ರೂ.257.90 ಕೋಟಿ ಪರಿಹಾರ ನೀಡಲಾಗಿದೆ. ಇದಲ್ಲದೆ, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ರೂ. 245.75 ಕೋಟಿ ಪರಿಹಾರ ಹಣ ಸೇರಿ ಒಟ್ಟಾರೆ ರೂ.498.73 ಕೋಟಿ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

“ರಾಜ್ಯ ಅಂಕಿಅಂಶವನ್ನೂ ನೀಡಿದ ಅವರು, “ರಾಜ್ಯಾದ್ಯಂತ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 14,21,000 ರೈತರಿಗೆ ಎಸ್ಡಿಆರ್ಎಫ್ ನಿಯಮದ ಪ್ರಕಾರ ರೂ.1,218 ಕೋಟಿ ಹಣ ಪರಿಹಾರ ರೂಪದಲ್ಲಿ ನೀಡಲಾಗಿದೆ. ಇದಲ್ಲದೆ, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ರೂ.1,033 ಕೋಟಿ ಸೇರಿ ಒಟ್ಟಾರೆಯಾಗಿ ರೂ. 2249 ಕೋಟಿ ಹಣವನ್ನು ಪರಿಹಾರದ ರೂಪದಲ್ಲಿ 14,21,000 ಲಕ್ಷ ರೈತರಿಗೆ ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ” ಎಂದರು

“ಇದರ ಜೊತೆಗೆ, ಜಾನುವಾರಗಳ ಹಾನಿಗೆ ರೂ.1.89 ಕೋಟಿ, ಮನೆಹಾನಿಗೆ ರೂ.40.86 ಕೋಟಿ, ಅಲ್ಪ ಪ್ರಮಾಣದ ಮನೆಹಾನಿಗಳಿಗೆ ರೂ.5.79 ಕೋಟಿ, ಕಾಳಜಿ ಕೇಂದ್ರಗಳಿಗೆ ರೂ.1.20 ಕೋಟಿ ರೂ ಹಾಗೂ ಮಳೆಯಿಂದ ಉಂಟಾದ ಎಲ್ಲಾ ಪ್ರಾಣಹಾನಿಗಳನ್ನೂ ಸೇರಿಸಿದರೆ ಒಟ್ಟಾರೆಯಾಗಿ ರೂ.2,300 ಕೋಟಿ ಹಣವನ್ನು ಪರಿಹಾರವಾಗಿ ನೀಡಲಾಗಿದೆ” ಎಂದು ತಿಳಿಸಿದರು.

“ರಾಜ್ಯಾದ್ಯಂತ ಕೇವಲ ಶೇ.03 ರಷ್ಟು ರೈತರಿಗೆ ಪರಿಹಾರ ಹಣ ಪಾವತಿಯಾಗಿಲ್ಲ ಎಂಬುದು ನಿಜ. ಕೆಲವು ರೈತರ ಆಧಾರ್ ಹೆಸರು ಮತ್ತು ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿನ ಹೆಸರು ತಾಳೆಯಾಗುತ್ತಿಲ್ಲ. ಮತ್ತೂ ಕೆಲವರದ್ದು ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆ ಲಿಂಕ್ ಮಾಡಿಲ್ಲ. ಹೀಗಾಗಿ 26,394 ರೈತರಿಗೆ ಪರಿಹಾರದ ಹಣ ಪಾವತಿ ಆಗಿಲ್ಲ. ಇದಲ್ಲದೆ, ಸರ್ಕಾರದವರು ಎನ್ಪಿಸಿಐ ಸೀಡಿಂಗ್ ಮಾಡಿದ್ದಾರೆ. ಹೀಗಾಗಿ 8,000 ರೈತರಿಗೆ ಹಣ ಪಾವತಿಯಾಗಿಲ್ಲ. ಈ ಎಲ್ಲಾ ಕಾರಣದಿಂದ ಒಟ್ಟಾರೆ 14,21,000 ರೈತರ ಪೈಕಿ 44,208 ರೈತರದ್ದು ಬಾಕಿ ಇದೆ. ಸರ್ಕಾರ ಈಗಾಗಲೇ ಹಣ ಪಾವತಿ ಮಾಡಿಯಾಗಿದ್ದು, ರೈತರ ಈ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿದ ಕೂಡಲೇ ರೈತರ ಖಾತೆಗೆ ಹಣ ಜಮೆ ಆಗಲಿದೆ” ಎಂದರು.

ಕೃಷಿ ವಿಮೆ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, “ವಿಮೆ ಕೂಡ ಈ ವರ್ಷ ನಾವು ತ್ವರಿತ ಪಾವತಿ ಮಾಡುವ ಕೆಲಸ ಮಾಡಿದ್ದೇವೆ. ಕೃಷಿ ಇಲಾಖೆ ಜೊತೆ ಮಾತನಾಡಿ ಎಷ್ಟು ಶೀಘ್ರ ಸಾಧ್ಯವೋ ಅಷ್ಟು ಶೀಘ್ರ ರೈತರ ಖಾತೆಗೆ ಬೆಳೆ ವಿಮೆ ಪಾವತಿ ಮಾಡಲಾಗುವುದು” ಎಂದು ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments